Connect with us

Latest

ಹೋರಾಟಗಾರರಂತೆ ರಾಮನ ಪ್ರತಿಮೆಯನ್ನು ದೇಶದೆಲ್ಲೆಡೆ ನಿರ್ಮಿಸೋದು ಸರಿಯಲ್ಲ: ಅಯೋಧ್ಯೆ ದೇವಾಲಯದ ಹಿರಿಯ ಅರ್ಚಕ

Published

on

ಲಕ್ನೋ: ಅಯೋಧ್ಯೆಯಲ್ಲಿ ಅತಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣ ಮಾಡಬೇಕೆಂಬ ಯೋಗಿ ಸರ್ಕಾರದ ಕನಸಿನ ಯೋಜನೆಗೆ ಈಗ ವಿರೋಧ ವ್ಯಕ್ತವಾಗಿದೆ. ವಿವಾದ ಸ್ಥಳದಲ್ಲಿ ತಾತ್ಕಾಲಿಕವಾಗಿ ನಿರ್ಮಾಣಗೊಂಡಿರುವ ರಾಮನ ದೇವಾಲಯದ ಹಿರಿಯ ಅರ್ಚಕರು ಈ ಯೋಜನೆಯನ್ನು ವಿರೋಧಿಸಿದ್ದಾರೆ.

ಕಳೆದ 25 ವರ್ಷಗಳಿಂದ ರಾಮನ ಜನ್ಮಭೂಮಿ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿರುವ ಮಹಾಂತ್ ಸತ್ಯೇಂದ್ರ ದಾಸ್ ಪ್ರತಿಕ್ರಿಯಿಸಿ, ರಾಮನ ಪ್ರತಿಮೆಯನ್ನು ದೇವಾಲಯದಲ್ಲಿ ನಿರ್ಮಿಸಿದರೆ ವಿರೋಧವಿಲ್ಲ, ಆದರೆ ಹೊರಾಂಗಣದಲ್ಲಿ ಪ್ರತಿಮೆ ನಿರ್ಮಿಸಿದರೆ ಅದನ್ನು ನೋಡಿಕೊಳ್ಳುವವರು ಯಾರು? ಪ್ರತಿನಿತ್ಯ ರಾಮನಿಗೆ ಪೂಜೆ ಸಲ್ಲಿಸುವವರು ಯಾರು ಇದು ಸರಿಯಲ್ಲ ಎಂದು ಸತ್ಯೇಂದ್ರ ದಾಸ್ ಪ್ರಶ್ನಿಸಿದ್ದಾರೆ.

ಈ ಯೋಜನೆ ರಾಜಕೀಯ ಆಟವಲ್ಲ. ರಾಜಕಾರಣಿಗಳು, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಯನ್ನು ದೇಶದೆಲ್ಲೆಡೆ ನಿರ್ಮಿಸಿದ್ದಾರೆ, ಅವೆಲ್ಲವು ಈಗ ಯಾವ ಸ್ಥಿತಿಯಲ್ಲಿವೆ ಎಂದು ಎಲ್ಲರಿಗೂ ಗೊತ್ತು. ರಾಮನಿಗೂ ಅದೇ ಸ್ಥಿತಿ ಬರುವುದು ಬೇಡ ಎಂದು ಸತ್ಯೇಂದ್ರ ದಾಸ್ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ವಿರೋಧದ ಮಧ್ಯೆಯು ಸರ್ಕಾರ ಈ ಯೋಜನೆ ಮಾಡಬೇಕೆಂದು ಮುಂದಾದರೆ ಕೆಲವು ಸಲಹೆಯನ್ನು ಪಾಲಿಸಬೇಕು. ರಾಮನ ಮೂರ್ತಿಯನ್ನು ಅತೀ ಎತ್ತರವಾಗಿ ನಿರ್ಮಿಸಬೇಡಿ, ಪ್ರತಿಮೆಯನ್ನು ಸರಿಯಾಗಿ ನಿರ್ವಹಿಸುವ ರೀತಿ ನಿರ್ಮಿಸಿ ಎಂದು ಸಲಹೆ ನೀಡಿದರು.

ರಾಮ ಮಂದಿರವನ್ನು ಪುನರ್ನಿರ್ಮಾಣ ಮಾಡುವ ಕುರಿತು ಮಾತನಾಡಿದ ಅರ್ಚಕರು, ರಾಮನಿಗೆ ದೇವಾಲಯ ಬೇಕೆಂದರೆ ಅವನೇ ಅದರ ಕುರಿತು ನೋಡಿಕೊಳ್ಳುತ್ತಾನೆ. ಇಲ್ಲವಾದರೆ ತಾತ್ಕಾಲಿಕ ದೇವಾಲಯದಲ್ಲಿಯೇ ಪೂಜೆ ಪಡೆಯುತ್ತಾನೆ. ಎಲ್ಲವೂ ರಾಮನ ಇಚ್ಚೆ. ಬಾಬ್ರಿ ಮಸೀದಿ ಪ್ರಕರಣದಿಂದ ಹೆಚ್ಚು ನೋವಾಗಿರುವುದು ಮುಸ್ಲಿಂ ಧರ್ಮದವರಿಗಲ್ಲ ಹಿಂದೂಗಳಿಗೆ. ಈ ಎಲ್ಲಾ ಯೋಜನೆ ಒಂದು ರಾಜಕೀಯ ನಾಟಕ. ರಾಮನ ನೆಲೆ ಇರುವುದು ದೇವಾಲಯದ ಒಳಗಡೆ, ಹೊರಗೆ ಅಲ್ಲ ಎಂದು ಹೇಳಿ ಪ್ರತಿಮೆ ನಿರ್ಮಾಣ ಯೋಜನೆಯನ್ನು ವಿರೋಧಿಸಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್ ಅವರು ನವೆಂಬರ್ 6 ರಂದು ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವದಂದು ಅಥವಾ ಮರುದಿನ ದೀಪಾವಳಿಯ ಶುಭದಿನದಂದು ಶ್ರೀರಾಮನ ಪ್ರತಿಮೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನಡೆಸುವ ಸಾಧ್ಯತೆಯಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *