Connect with us

10 ಬಾರಿ ಗುಂಡು ಹಾರಿಸಿ 60ರ ವೃದ್ಧೆಯ ಕೊಲೆ, ಮಗನನ್ನೂ ಕೊಂದ್ರು

10 ಬಾರಿ ಗುಂಡು ಹಾರಿಸಿ 60ರ ವೃದ್ಧೆಯ ಕೊಲೆ, ಮಗನನ್ನೂ ಕೊಂದ್ರು

ಮೀರತ್: ಪತಿ ಕೊಲೆ ಪ್ರಕರಣದ ವಿಚಾರಣೆಯ ಮುನ್ನ ದಿನ ದುಷ್ಕರ್ಮಿಗಳು 60 ವರ್ಷದ ವೃದ್ಧೆಯ ಮೇಲೆ 10 ಬಾರಿ ಗುಂಡು ಹಾರಿಸಿ ಕೊಲೆ ಮಾಡಿರೋ ಘಟನೆ ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.

ಮೂವರು ದುಷ್ಕರ್ಮಿಗಳು ಬುಧವಾರ ತೀರಾ ಸಮೀಪದಿಂದ ವೃದ್ಧೆಯ ಮೇಲೆ 10 ಬುಲೆಟ್ ಹಾರಿಸಿ ಕೊಂದಿದ್ದಾರೆ. ವೃದ್ಧೆಯ ಮಗನನ್ನೂ ಕೂಡ ಗ್ರಾಮದ ಸಮೀಪದಲ್ಲೇ ಕಾರಿನಲ್ಲಿ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.

ವೃದ್ಧೆ ನಿಚೇತರ್ ಕೌರ್ ತನ್ನ ಮನೆಯ ಹೊರಗಡೆ ಮಂಚದ ಮೇಲೆ ಕುಳಿತಿದ್ದರು. ಆಕೆಯ ಪಕ್ಕದ ಮಂಚದಲ್ಲಿ ಮತ್ತೊಬ್ಬರು ಮಹಿಳೆ ಕುಳಿತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ಬಂದು ಸುಮಾರು 2 ಅಡಿ ದೂರದಿಂದ ಕೌರ್ ಅವರ ಎದೆಗೆ ಪಿಸ್ತೂಲಿನಿಂದ ಫೈರ್ ಮಾಡಿದ್ದಾನೆ. ವೃದ್ಧೆ ಮಂಚದ ಮೇಲೆ ಬಿದ್ದ ನಂತರ ಮತ್ತಿಬ್ಬರು ಪಿಸ್ತೂಲ್ ಹಿಡಿದು ಬಂದು ಸತತವಾಗಿ ವೃದ್ಧೆ ಮೇಲೆ ಗುಂಡು ಹಾರಿಸಿದ್ದಾರೆ.

2016ರಲ್ಲಿ ನಿಚೇತರ್ ಕೌರ್ ಅವರ ಗಂಡನನ್ನು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಕೌರ್ ಅವರ ಕೆಲವು ಸಂಬಂಧಿಕರು ಜೈಲು ಸೇರಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌರ್ ಮತ್ತು ಅವರ ಪುತ್ರ ಬಲ್ವಿಂದರ್ ಸಾಕ್ಷಿ ಹೇಳಲು ಗುರುವಾರದಂದು ಕೋರ್ಟ್ ವಿಚಾರಣೆಗೆ ಹಾಜರಾಗಬೇಕಿತ್ತು.

6 ಬಾರಿ ಗುಂಡೇಟು ಬಿದ್ದ ನಂತರ ಮಂಚದ ಮೇಲೆ ಬಿದ್ದ ವೃದ್ಧೆಗೆ ಇನ್ನೂ ಚಲನೆ ಇದ್ದಿದ್ದನ್ನು ಕಂಡು ಮತ್ತೊಬ್ಬ ವ್ಯಕ್ತಿ ಬಂದು ತಲೆಗೆ ಗುಂಡು ಹೊಡೆದಿದ್ದಾನೆ. ಅಲ್ಲಿದ್ದ ಮತ್ತಿಬ್ಬರು ವೃದ್ಧೆಯ ಮುಖಕ್ಕೆ ಗುಂಡು ಹಾರಿಸಿದ್ದಾರೆ. ಬಳಿಕ ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಾವಳಿ ವೃದ್ಧೆಯ ಮನೆ ಮುಂದೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದುಷ್ಕರ್ಮಿಗಳು ಕರ್ಚೀಫ್‍ನಿಂದ ಮುಖವನ್ನ ಮುಚ್ಚಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿಗಳ ಆಪ್ತರು ವೃದ್ಧೆ ಹಾಗೂ ಅವರ ಮಗನಿಗೆ ಎಚ್ಚರಿಕೆ ನೀಡಿದ್ದರು ಎಂದು ವರದಿಯಾಗಿದೆ. ಆಡಳಿತ ವೈಫಲ್ಯದ ಹಿನ್ನೆಲೆಯಲ್ಲಿ ಐವರು ಪೊಲೀಸರನ್ನು ಅಮಾನತು ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.

 ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಿದ್ದು, ಆತನ ಅಪರಾಧ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತಿದೆ. ಆ ಪ್ರದೇಶದ ಪೊಲೀಸ್ ಠಾಣೆಯ ಇನ್ ಚಾರ್ಜ್ ಸೇರಿದಂತೆ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಉತ್ತರಪ್ರದೇಶ ಕಾನೂನು ಸುವ್ಯವಸ್ಥೆ ಇನ್‍ಚಾರ್ಜ್ ಆಗಿರೋ ಆನಂದ್ ಕುಮಾರ್ ಹೇಳಿದ್ದಾರೆ.

Advertisement
Advertisement