ಬೆಂಗಳೂರು: ಹಾರಾಟದ ವೇಳೆ ಬೆಂಗಳೂರು ಏರೋಸ್ಪೇಸ್ ನಲ್ಲಿ ಎರಡು ವಿಮಾನಗಳ ಮಧ್ಯೆ ಸಂಭವಿಸಬಹುದಾಗಿದ್ದ ಡಿಕ್ಕಿ ಕೆಲವೇ ಅಂತರದಲ್ಲಿ ತಪ್ಪಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜುಲೈ 10 ರಂದು ಇಂಡಿಗೋ ಸಂಸ್ಥೆಯ ಎರಡು ವಿಮಾನಗಳು ಕೇವಲ 200 ಅಡಿ ಅಂತರದಲ್ಲಿ ಹಾರಾಟ ನಡೆಸಿತ್ತು. ಒಂದು ವೇಳೆ ಮುಖಾಮುಖಿ ಡಿಕ್ಕಿಯಾಗಿದ್ದರೆ ಹೈದರಾಬಾದಿಗೆ ಹೊರಟಿದ್ದ ವಿಮಾನದಲ್ಲಿದ್ದ 162 ಜನ ಹಾಗೂ ಹಾಗೂ ಕೊಚ್ಚಿಗೆ ತೆರಳುತ್ತಿದ್ದ ವಿಮಾನದಲ್ಲಿದ್ದ 166 ಪ್ರಯಾಣಿಕರ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿತ್ತು.
Advertisement
ನಡೆದದ್ದು ಏನು?
6ಇ-779 ಇಂಡಿಗೋ ವಿಮಾನವು ಕೊಯಮತ್ತೂರಿನಿಂದ ಹೈದ್ರಾಬಾದ್‍ಗೆ ಹೊರಟಿತ್ತು. ಅದೇ ಸಮಯದಲ್ಲಿ 6ಇ-6505 ವಿಮಾನವು ಬೆಂಗಳೂರಿನಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿತ್ತು. ಎರಡು ವಿಮಾನಗಳು ಪರಸ್ಪರ ಮುಖಾಮುಖಿಯಾಗಿ ಡಿಕ್ಕಿ ಹೊಡೆಯುವ ಸಂಭವವನ್ನು ಅರಿತ ಸಂಚಾರ ಡಿಕ್ಕಿ ತಪ್ಪಿಸುವ ವ್ಯವಸ್ಥೆ(ಟಿಸಿಎಎಸ್) ಎಚ್ಚರಿಕೆಯ ಸಿಗ್ನಲ್ ರವಾನಿಸಿದೆ. ಅಪಾಯದ ಸಿಗ್ನಲ್ ಬಂದ ಕೂಡಲೇ ವಿಮಾನಗಳ ಹಾರಾಟದ ಎತ್ತರವನ್ನು ಬದಲಾಯಿಸಲಾಗಿದೆ ಎಂದು ಇಂಡಿಗೋ ಏರ್ ಲೈನ್ಸ್ ಹೇಳಿದೆ.
Advertisement
Advertisement
ಹೈದರಾಬಾದಿಗೆ ಹೊರಟಿದ್ದ ವಿಮಾನವು 36,000 ಅಡಿ ಅಂತರದಲ್ಲಿ ಹಾರಬೇಕಿದ್ದರೆ, ಕೊಚ್ಚಿಗೆ ಹೊರಟಿದ್ದ ವಿಮಾನ 28,000 ಅಡಿ ಎತ್ತರದಲ್ಲಿರಬೇಕಿತ್ತು. ಆದರೆ ಈ ವಿಮಾನಗಳು ಅನುಕ್ರಮವಾಗಿ 27,300 ಅಡಿ ಮತ್ತು 27,500 ಅಡಿ ಎತ್ತರದಲ್ಲಿ ಹಾರಾಟ ನಡೆಸುತಿತ್ತು. 8 ಕಿ.ಮೀ ದೂರದಲ್ಲಿದ್ದಾಗ ವಿಮಾನಗಳ ಕಾಕ್‍ಪಿಟ್ ಗೆ ಎಚ್ಚರಿಕೆ ಸಿಗ್ನಲ್ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾನ ಅಪಘಾತ ತನಿಖಾ ಮಂಡಳಿ(ಎಎಐಬಿ) ತನಿಖೆ ಆರಂಭಿಸಿದೆ.
Advertisement
ಏನಿದು ಟಿಸಿಎಎಸ್?
ಹಾರಾಟದ ಸಂದರ್ಭದಲ್ಲಿ ಎರಡು ವಿಮಾನಗಳ ಮಧ್ಯೆ ಸಂಭವಿಸಬಹುದಾದ ಡಿಕ್ಕಿಯನ್ನು ತಪ್ಪಿಸಲು ಸಂಚಾರ ಡಿಕ್ಕಿ ತಪ್ಪಿಸುವ ವ್ಯವಸ್ಥೆ(ಟಿಸಿಎಎಸ್) ಬಳಸಲಾಗುತ್ತದೆ. ಕಡಿಮೆ ಅಂತರದಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಎರಡು ವಿಮಾನಗಳು ಹಾರಾಟ ನಡೆಸುತ್ತಿದ್ದರೆ ಟಿಸಿಎಎಸ್ ನಲ್ಲಿರುವ ಟ್ರಾನ್ಸ್ಪಾಂಡರ್ ಸಿಗ್ನಲ್‍ಗಳನ್ನು ಆಧಾರಿಸಿ ಕಾಕ್‍ಪಿಟ್ ನಲ್ಲಿ ಸ್ವಯಂಚಾಲಿತವಾಗಿ ಧ್ವನಿ ಸಂದೇಶ ನೀಡುತ್ತದೆ. ಎಚ್ಚರಿಕೆಯ ಸಂದೇಶ ಹೇಗಿರುತ್ತದೆ ಎಂದರೆ ಒಂದು ವಿಮಾನದ ಕಾಕ್‍ಪಿಟ್‍ಗೆ “ಮತ್ತಷ್ಟು ಎತ್ತರಕ್ಕೆ ಹೋಗಿ” ಎನ್ನುವ ಎಚ್ಚರಿಕೆ ನೀಡಿದರೆ ಇನ್ನೊಂದು ವಿಮಾನಕ್ಕೆ “ಎತ್ತರವನ್ನು ತಗ್ಗಿಸಿ” ಎನ್ನುವ ಧ್ವನಿ ಸಂದೇಶವನ್ನು ನೀಡುತ್ತದೆ. ಈ ಸಂದೇಶ ಅನುಸಾರ ಪೈಲಟ್‍ಗಳು ವಿಮಾನ ಎತ್ತರವನ್ನು ಏರಿಸಿ/ತಗ್ಗಿಸುವ ಮೂಲಕ ಡಿಕ್ಕಿಯನ್ನು ತಪ್ಪಿಸುತ್ತಾರೆ.
ಪರಸ್ಪರ ಡಿಕ್ಕಿಯಾಗುವ ಬಗ್ಗೆ ಟಿಸಿಎಎಸ್ ಸಂದೇಶ ಮೊಳಗಿಸುವುದು ಇದೇ ಮೊದಲೆನಲ್ಲ. ಈ ಜನವರಿಯಲ್ಲಿ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳು ಪರಸ್ಪರ ಮುಖಾಮುಖಿಯಾಗಿತ್ತು.