ಅಮಿತ್‌ ಶಾ ಹೇಳಿಕೆ ಗದ್ದಲ, ಕಾಂಗ್ರೆಸ್‌ ಪ್ರತಿಭಟನೆ; ಅಧಿವೇಶನದ ಕೊನೆಯ ದಿನವೂ ಕಲಾಪ ಮುಂದೂಡಿಕೆ!

Public TV
2 Min Read
Rahul Gandhi 2 1

ನವದೆಹಲಿ: ಅಂಬೇಡ್ಕರ್‌ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನೀಡಿದ ಹೇಳಿಕೆ ಬಿಜೆಪಿ-ಕಾಂಗ್ರೆಸ್‌ ನಡುವೆ ಕಿಚ್ಚುಹೊತ್ತಿಸಿದೆ. ಚಳಿಗಾಲ ಅಧಿವೇಶನ ಕೊನೆಯ ದಿನವಾದ ಇಂದೂ ಬಿಜೆಪಿ-ಕಾಂಗ್ರೆಸ್‌ ಪ್ರತಿಭಟನೆಗಿಳಿದಿವೆ. ಈ ಹಿನ್ನೆಲೆಯಲ್ಲಿ ಕೊನೆಯ ದಿನದ ಕಲಾಪವನ್ನು ಮಧ್ಯಾಹ್ನ 12 ಗಂಟೆ ವರೆಗೆ ಮುಂದೂಡಲಾಗಿದೆ.

ಗುರುವಾರ ಸಂಸತ್‌ ಆವರಣದ ಮಕರ ದ್ವಾರದಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಕಂಡುಬಂದ ನಾಟಕೀಯ ಬೆಳವಣಿಗೆಗಳ ಒಂದು ದಿನದ ನಂತರ ಇಂಡಿಯಾ ಒಕ್ಕೂಟ ವಿಜಯ್‌ ಚೌಕ್‌ನಿಂದ ಸಂಸತ್ತಿನವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದೆ. ಅಮಿತ್‌ ಶಾ ಅವರು ಕ್ಷಮೆ ಕೇಳಬೇಕು ಇಲ್ಲವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ನಾಯಕರು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಸದಸ್ಯರು ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಅಧಿವೇಶನದ ಕೊನೆಯ ದಿನ ಗದ್ದಲದಲ್ಲೇ ಸಮಾಪ್ತಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

Rahul Gandhi 4

ಅಮಿತ್‌ ಶಾ ರಾಜೀನಾಮೆಗೆ ಪಟ್ಟು
ಚಳಿಗಾಲದ ಅಧಿವೇಶನದಲ್ಲಿ ʻಸಂವಿಧಾನʼ ಕುರಿತ ಚರ್ಚೆ ವೇಳೆ ರಾಜ್ಯಸಭೆಯಲ್ಲಿ ಅಮಿತ್‌ ಶಾ ಅವರು ಮಾತನಾಡುತ್ತಾ, ʻಅಂಬೇಡ್ಕರ್‌ ಅಂಬೇಡ್ಕರ್‌ ಅಂಬೇಡ್ಕರ್‌ ಇದೊಂದು ಫ್ಯಾಷನ್‌ ಆಗಿಬಿಟ್ಟಿದೆ. ಇಷ್ಟು ಬಾರಿ ದೇವರ ಹೆಸರು ಹೇಳಿದ್ದರೆ ಅವರಿಗೆ ಸ್ವರ್ಗದಲ್ಲಿ ಸ್ಥಾನವಾದರೂ ಸಿಗುತ್ತಿತ್ತುʼ ಎಂದು ಹೇಳಿದ್ದರು. ಈ ಕುರಿತ ವೀಡಿಯೋಗಳನ್ನು ವಿಪಕ್ಷ ನಾಯಕರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಕೇಂದ್ರ ಗೃಹ ಸಚಿವರು ರಾಜೀನಾಮೇ ನೀಡಬೇಕು, ಅಂಬೇಡ್ಕರ್‌ ವಿರುದ್ಧದ ಟೀಕೆಗೆ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಸಾರಂಗಿಗೆ ಪೆಟ್ಟು:
ಅಮಿತ್‌ ಶಾ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ಖಂಡಿಸಿ ಇತ್ತ ಸಂಸತ್‌ ಆವರಣದಲ್ಲಿ ಬಿಜೆಪಿ ಸಹ ಪ್ರತಿಭಟನೆ ನಡೆಸುತ್ತಿತ್ತು.ಈ ವೇಳೆ ಬಿಜೆಪಿ ಸಂಸದ ಪ್ರತಾಪ್‌ ಸಾರಂಗಿ (Pratap Chandra Sarangi) ಕುಸಿದುಬಿದ್ದು, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ತಳ್ಳಿದರೆಂದು ಆರೋಪ ಮಾಡಿದ್ದರು. ಇದಕ್ಕೆ ರಾಹುಲ್‌ಗಾಂಧಿ ಸಹ ಸ್ಪಷ್ಟನೆ ನೀಡಿದರು. ಈ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಸಹ ತಮ್ಮನ್ನು ದೈಹಿಕವಾಗಿ ಬಿಜೆಪಿ ಸಂಸದರು ತಳ್ಳಿದ್ದಾರೆ, ಇದರ ವಿರುದ್ಧ ತನಿಖೆ ನಡೆಸುವಂತೆ ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿದ್ದರು.

Share This Article