ಬೆಂಗಳೂರು: ಬಜೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಗರಂ ಆಗಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರ ರಚನೆಯಾದ ಮೇಲೆ ಹೊಸ ಬಜೆಟ್ ಮಂಡನೆ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ ಸಿದ್ದರಾಮಯ್ಯ ಹೊಸ ಬಜೆಟ್ ಮಂಡನೆ ಬೇಡ ಎಂದಿದ್ದಕ್ಕೆ ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
Advertisement
ಈ ಕುರಿತಂತೆ ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ ಹಾಗೂ ವೇಣುಗೋಪಾಲ್ ಮುಂದೆಯೂ ದೇವೇಗೌಡರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ಬಜೆಟ್ ಮಂಡಿಸುವ ವಿಚಾರ ಕುರಿತು ಸಮನ್ವಯ ಸಮಿತಿ ರಚನೆ ಏಕೆ ಬೇಕಿತ್ತು? ಅಧ್ಯಕ್ಷರಾದ ಸಿದ್ದರಾಮಯ್ಯನವರೇ ಹೀಗೆ ಮಾತಾಡಿದರೆ ಹೇಗೆ ಎಂದು ಖಾರವಾಗಿ ಪ್ರಶ್ನೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನು ಓದಿ: ಸಿಎಂ ಹೆಚ್‍ಡಿಕೆ ಬಜೆಟ್ ಹೇಳಿಕೆಗೆ ನೇರವಾಗಿಯೇ ತಿರುಗೇಟು ಕೊಟ್ಟ ಮಾಜಿ ಸಿಎಂ
Advertisement
ಏನೇ ಚರ್ಚೆಗಳಾದರೂ ಸಮನ್ವಯ ಸಮಿತಿಯಲ್ಲಿ ಆಗಬೇಕು. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಬಜೆಟ್ ಬೇಡ ಎಂದು ಹೇಳಿ ಯಾವ ಸಂದೇಶವನ್ನು ಅವರು ರವಾನಿಸುತ್ತಿದ್ದಾರೆ. ಅಲ್ಲದೇ ನಿಮ್ಮ ಮಾಜಿ ಸಿಎಂ ಮಾತುಗಳಿಗೆ ಕಡಿವಾಣ ಹಾಕಿ ಅಂತಾ ದೇವೇಗೌಡರು ನೇರವಾಗಿ ಹೇಳಿದ್ದಾರೆ.
Advertisement
ದೇವೇಗೌಡರ ಸೂಚನೆಯಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ರಾಹುಲ್ ಗಾಂಧಿಗೂ ದೂರು ನೀಡಿದ್ದಾರೆ. ಸಿದ್ದರಾಮಯ್ಯನವರ ಹೇಳಿಕೆಯಿಂದ ಶಾಸಕರುಗಳು ಗೊಂದಲದಲ್ಲಿ ಮುಳುಗಿದ್ದಾರೆ. ಅವರ ಒಂದು ಹೇಳಿಕೆ ಮೈತ್ರಿ ಸರ್ಕಾರದ ಒಪ್ಪಂದವನ್ನೇ ತಲೆಕೆಳಗೆ ಮಾಡುವಂತೆ ಮಾಡಿದೆ. ಸಿದ್ದರಾಮಯ್ಯ ಅವರ ಜತೆ ಮಾತನಾಡಿ ಅವರಿಗೆ ಇನ್ನು ಮುಂದೆ ಭಿನ್ನ ಹೇಳಿಕೆ ನೀಡದಂತೆ ಸೂಚನೆ ಕೊಡಿ ಎಂದು ಎಚ್‍ಡಿಕೆ ದೂರಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ.