– ನೆರೆ ಪರಿಹಾರ ಬಿಡುಗಡೆ ಮಾಡಿ ಎಂದು ಮೋದಿಗೆ ಪತ್ರ
ಕೋಲ್ಕತ್ತಾ: ಜಾರ್ಖಂಡ್‍ನ (Jharkhand) ಜಲಾಶಯಗಳಿಂದ ದಾಮೋದರ್ ವ್ಯಾಲಿ ಕಾಪೆರ್ಪೋರೇಷನ್ 5 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ದಕ್ಷಿಣ ಬಂಗಾಳದಲ್ಲಿ ಪ್ರವಾಹ (Flood) ಉಂಟಾಗಿದೆ ಎಂದು ಪಶ್ಚಿಮ ಬಂಗಾಳದ (West Bengal) ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಪ್ರವಾಹವು `ಮಾನವ ನಿರ್ಮಿತ’ ವಿಪತ್ತು ಎಂದು ತಮ್ಮ ಆರೋಪವನ್ನು ಪುನರಾವರ್ತಿಸಿದ ಅವರು, ಪರಿಹಾರ ಬಿಡುಗಡೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಪತ್ರ ಬರೆದಿದ್ದಾರೆ. ಪತ್ರದಲ್ಲಿ ದಕ್ಷಿಣ ಬಂಗಾಳದ ಜಿಲ್ಲೆಗಳಾದ ಪುರ್ಬಾ ಬರ್ಧಮಾನ್, ಪಶ್ಚಿಮ್ ಬರ್ಧಮಾನ್, ಬಿರ್ಭುಮ್, ಬಂಕುರಾ, ಹೌರಾ, ಹೂಗ್ಲಿ, ಪುರ್ಬಾ ಮೇದಿನಿರ್ಪೋರ್ ಮತ್ತು ಪಶ್ಚಿಮ ಮೇದಿನಿರ್ಪೋರ್ ತೀವ್ರ ಪ್ರವಾಹಕ್ಕೆ ಗುರಿಯಾಗಿದೆ ಎಂದು ಉಲ್ಲೇಖಿಸಿದ್ದಾರೆ.
ದಾಮೋದರ್ ವ್ಯಾಲಿ ಕಾಪೆರ್ಪೋರೇಷನ್ ಒಡೆತನದ ಮೈಥಾನ್ ಮತ್ತು ಪಂಚೆಟ್ ಅಣೆಕಟ್ಟುಗಳಿಂದ ಸುಮಾರು 5 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿದೆ. ಯೋಜಿತವಲ್ಲದ ಮತ್ತು ಏಕಪಕ್ಷೀಯ ನಿರ್ಧಾರದಿಂದ ಈ ವಿನಾಶಕಾರಿ ಪ್ರವಾಹವನ್ನು ಬಂಗಾಳ ಕಂಡಿದೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯವು 2009ರ ನಂತರ ಲೋವರ್ ದಾಮೋದರ್ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಈಗ ಅತಿದೊಡ್ಡ ಪ್ರವಾಹವನ್ನು ಎದುರಿಸುತ್ತಿದೆ. 1,000 ಚದರ ಕಿಲೋಮೀಟರ್‍ಗಿಂತಲೂ ಹೆಚ್ಚು ಪ್ರದೇಶವು ಹಾನಿಗೊಳಗಾಗಿದೆ. ಅಪಾರ ಪ್ರಮಾಣದ ಬೆಳೆ ಹಾನಿಗಾಗಿದೆ. ಇದರಿಂದ ಲಕ್ಷಾಂತರ ಜನ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾ ಅವರು, ಬಂಗಾಳ ಸರ್ಕಾರದ ವೈಫಲ್ಯದಿಂದ ಬಂಗಾಳದ ಜನರು ಪ್ರವಾಹದಿಂದ ಬಳಲುತ್ತಿದ್ದಾರೆ. ಆದರೆ ಅವರು ತಮ್ಮ ಅಧಿಕಾರಿಗಳ ಮೇಲೆ ಕೋಪವನ್ನು ಹೊರಹಾಕುತ್ತಿಲ್ಲ. ಜಾಖರ್ಂಡ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಣೆಕಟ್ಟುಗಳಿಂದ ನೀರು ಬಿಡುವ ಬಗ್ಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಪಶ್ಚಿಮ ಬಂಗಾಳದ ಪ್ರತಿನಿಧಿಗಳನ್ನು ಹೊಂದಿರುವ ದಾಮೋದರ್ ಕಣಿವೆ ಜಲಾಶಯ ನಿಯಂತ್ರಣ ಸಮಿತಿ (ಡಿವಿಆರ್‍ಆರ್‌ಸಿ) ಸಲಹೆಯ ಮೇರೆಗೆ ನೀರು ಬಿಡಲಾಗಿದೆ ಎಂದು ಕೇಂದ್ರ ವಿದ್ಯುತ್ ಸಚಿವಾಲಯ ಹಾಗೂ ಜಾರ್ಖಂಡ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿವೆ.