ಯಾವುದೇ ಕ್ಷೇತ್ರ ಆದರೂ ಸರಿ ಅಲ್ಲಿ ಹೊಸ ಹೊಸ ಪ್ರಯೋಗಗಳು ನಡೀತಾಯಿರಬೇಕು. ಆಗಾದಾಗ ಮಾತ್ರವೇ ಸಿದ್ದಸೂತ್ರಗಳನ್ನ ಮುರಿಯೋದಕ್ಕೆ ಸಾಧ್ಯವಾಗೋದು, ಹೊಸದೇನನ್ನೋ ಸೃಷ್ಟಿ ಮಾಡೋದಕ್ಕಾಗೋದು. ಸದ್ಯ ಕನ್ನಡ ಚಿತ್ರರಂಗದ ದಿಕ್ಕು ಬದಲಾಗಿದೆ. ದಶದಿಕ್ಕುಗಳಲ್ಲೂ ಚಂದನವನದ ಬಗ್ಗೆ ಮಾತನಾಡುವಂತಾಗಿದೆ. ಸಿನಿಮಾ ಮೇಕಿಂಗ್ ಸ್ಟೈಲು, ಸ್ಟೋರಿ ಟೆಲ್ಲಿಂಗ್ ಕಾನ್ಸೆಪ್ಟು ಯೂನಿಕ್ ಆಗ್ತಿರೋದ್ರಿಂದ ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್‍ವುಡ್‍ನತ್ತ ಕಣ್ಣರಳಿಸಿದೆ. ಇದೇ ಹೊತ್ತಿಗೆ ಆಲ್ಬಂ (Album) ಲೋಕದಲ್ಲೂ ಕನ್ನಡಿಗರು ಸಂಚಲನ ಮೂಡಿಸುವ ಭರವಸೆ ಮೂಡಿದೆ. ಪಾಪ್‍ಗೆ ಸೆಡ್ಡು ಹೊಡೆದಂತೆ ರ‍್ಯಾಪ್‌ಹಾಡುಗಳನ್ನು ಕಟ್ಟಿಕೊಡುವಲ್ಲಿ ಕೆಲ ರ‍್ಯಾಪ್‌ಗಳು ನಿರತರಾಗಿದ್ದರೆ, ಇಲ್ಲೊಂದು ಐಟಿ ಬಳಗ ಆಲ್ಬಂ ಲೋಕದಲ್ಲಿ ಹೊಸ ಪ್ರಯೋಗ ಮಾಡಿ ಸುದ್ದಿಯಲ್ಲಿದೆ. ಅದೇ `ಒಮ್ಮೆ ಹೇಳು ದೇವರೇ’ (Omme Helu Devare). ಹಾಡಿನ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ವಿಶೇಷ ಅಂದರೆ ಈ ಹಾಡಿಗೆ ಕನ್ನಡಿಗರನ್ನ ಮಾತ್ರವಲ್ಲ ಎಲ್ಲಾ ಜನರನ್ನೂ ನೆನಪುಗಳ ಲೋಕದಲ್ಲಿ ಮೆರವಣಿಗೆ ಹೊರಡಿಸುವ ಶಕ್ತಿಯಿದೆ.
Advertisement
`ಒಮ್ಮೆ ಹೇಳು ದೇವರೇ’… ತಾತ ಹಾಗೂ ಮೊಮ್ಮಗನ ಸಂಬಂಧ ಮತ್ತು ಬಾಂಧವ್ಯವನ್ನ ಅನಾವರಣ ಮಾಡಿರುವಂತಹ ಆಲ್ಬಂ ಸಾಂಗ್. ಭಾನುಪ್ರಕಾಶ್ ಜೋಯಿಸ್ (Bhanuprakash Jois) ಎಂಬುವವರು ಸಾಹಿತ್ಯ ಹೊಸೆದು, ಸ್ಕ್ರೀನ್ ಪ್ಲೇ ರಚಿಸಿ ಈ ಆಲ್ಬಂ ಗೀತೆಯನ್ನ ಡೈರೆಕ್ಟ್ ಮಾಡಿದ್ದಾರೆ. ಮಯೂರ್ ಅಂಬೆಕಲ್ಲು (Mayur Ambekallu) ಸಂಗೀತ, ಅಭಿಷೇಕ್ ಎಂ ಆರ್ ಕಂಠಸಿರಿಯ ಈ ಹಾಡಿಗೆ ಶಿವಶಂಕರ್ ನೂರಂಬಡ ಕ್ಯಾಮೆರಾ ಕೈಚಳಕ ತೋರಿದ್ದಾರೆ. ವಿಎಫೆಕ್ಟ್, ಪೋಸ್ಟರ್ ಡಿಸೈನ್ ಸೇರಿದಂತೆ ಸಂಕಲನದ ಜವಾಬ್ದಾರಿಯನ್ನೂ ತಮ್ಮ ಹೆಗಲ ಮೇಲೆ ಹಾಕ್ಕೊಂಡಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಕಲಾವಿದರಾದ ಅನಂತ್ ವೇಲು ಅವರು ಅಜ್ಜನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮೊಮ್ಮಗನ ಪಾತ್ರದಲ್ಲಿ ಯುವ ನಟ ಕರ್ಣ ಹಾಗೂ ಪತ್ರಕರ್ತ ಹರಿಪರಾಕ್ ಅವರ ಪುತ್ರ ಮಯೂರ್ ಮಿಂಚಿದ್ದಾರೆ. ಆದರ್ಶ್ ಕೂಡ ಆಲ್ಬಂ ಸಾಂಗ್ ನಲ್ಲಿ ಕಾಣಸಿಗ್ತಾರೆ.
Advertisement
Advertisement
ಸಿನಿಮಾ ಹಾಡುಗಳಿರಲಿ, ಆಲ್ಬಂ ಗೀತೆಗಳಾಗಿರಲಿ ತಂದೆ-ಮಗಳು, ತಾಯಿ-ಮಗನಿಗೆ ಟ್ರಿಬ್ಯೂಟ್ ಆಗಿವೆ ಹೊರೆತು ಎಲ್ಲಿಯೂ ಗ್ರ್ಯಾಂಡ್‍ಪಾಗೆ ಮತ್ತು ಗ್ರ್ಯಾಂಡ್‍ಸನ್‍ಗೆ ಡೆಡಿಕೇಟ್ ಮಾಡಲಾಗಿಲ್ಲ. ಆದ್ರೀಗ ಅಪರೂಪಕ್ಕೆ `ಒಮ್ಮೆ ಹೇಳು ದೇವರೇ’ ಹಾಡನ್ನ ತಾತ ಮತ್ತು ಮೊಮ್ಮಗನಿಗೆ ಅರ್ಪಣೆ ಮಾಡಲಾಗಿದೆ. ಬಾಲ್ಯದಲ್ಲಿ ಅಜ್ಜನ ಅಕ್ಕರೆ, ಪ್ರೀತಿ, ವಾತ್ಸಲ್ಯ, ಮಮಕಾರವನ್ನ ಕಂಡ ಮೊಮ್ಮಗ ಬೆಳೆದು ದೊಡ್ಡವನಾದ್ಮೇಲೆ ಅಜ್ಜನನ್ನು ಎಷ್ಟು ಮಿಸ್ ಮಾಡಿಕೊಳ್ತಾನೆ, ಕನಸುಗಳೊಟ್ಟಿಗೆ ಹೇಗೆ ಜೀವಿಸ್ತಾನೆ, ನೆನಪುಗಳೊಟ್ಟಿಗೆ ಅದ್ಹೇಗೆ ಮುಂದೆ ಸಾಗ್ತಾನೆ ಅನ್ನೋದನ್ನ `ಒಮ್ಮೆ ಹೇಳು ದೇವರೇ’ ಹಾಡಿನ ಮೂಲಕ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಸೌಲ್ ಕ್ರಾಫ್ಟ್ ಫ್ಯಾಕ್ಟರಿ ಯೂಟ್ಯೂಬ್ ಚಾನಲ್‍ನಲ್ಲಿ ಈ ಸಾಂಗ್ ಲಭ್ಯವಿದೆ. ಇದನ್ನೂ ಓದಿ:ತಂದೆ ವಿರುದ್ಧವೇ ಕೊಲೆ ಬೆದರಿಕೆ ಆರೋಪ ಮಾಡಿದ ನಟಿ ಅರ್ಥನಾ ಬಿನು
Advertisement
ಏಟೈಸ್, ನೈಂಟಿಸ್ ಜನರೇಷನ್‍ನ ಮಕ್ಕಳು ಅಜ್ಜನ ಹೆಗಲೇರಿ ಊರೆಲ್ಲಾ ಮೆರವಣಿಗೆ ಹೋಗಿಬರುತ್ತಿದ್ದರು. ಪೆಟ್ಟಿ ಅಂಗಡಿಯಲ್ಲಿ ಚಾಕಲೇಟ್, ಚಕ್ಲಿ, ನಿಪ್ಪಟ್ಟು ತಿನ್ಕೊಂಡು ಹೊಟ್ಟೆ ತುಂಬಿಸಿಕೊಳ್ತಿದ್ದರು. ಮನೆಯಂಗಳದಲ್ಲಿ ಅಜ್ಜನೊಟ್ಟಿಗೆ ಗೋಲಿ, ಬುಗುರಿ ಆಟ ಆಡುತ್ತಿದ್ದರು. ಲೂನಾ ಸ್ಕೂಟರ್ ಏರಿ ಶಾಲೆಗೆ ಹೋಗಿಬರುತ್ತಿದ್ದರು. ಆದರೆ ಈಗೀನ ಮಕ್ಕಳು ಬೇಬಿ ಸಿಟ್ಟಿಂಗ್, ಡೇ ಕೇರ್ ಅಂತ ಇಡೀ ದಿನ ಅನಾಮಧೇಯರ ಜೊತೆಯಲ್ಲೇ ಕಳೆಯಬೇಕು. ಮನೆಗೆ ಬಂದ್ಮೇಲೆ ಮೊಬೈಲ್, ನಾಯಿ ಮರಿಗಳ ಜೊತೆ ಆಟ ಆಡ್ಬೇಕು ಬಿಟ್ಟರೆ ಬೇರೆ ದಾರಿನೇ ಇಲ್ಲ. ಹೀಗಾಗಿ, ಇವತ್ತಿನ ಜನರೇಷನ್ ಮಕ್ಕಳಿಗೆ ಅಜ್ಜ-ಅಜ್ಜಿಯ ಪ್ರೀತಿಯ ಕೊರತೆಯಿದೆ. ಕೂಸುಮರಿ ಆಡಿಸಲು, ಕುರುಕ್ ತಿಂಡಿ ಕೊಡಿಸಲು `ಒಮ್ಮೆ ಹೇಳು ದೇವರೇ’ ಹಾಡಿನಲ್ಲಿರುವ ಅಜ್ಜಪ್ಪನಂಥ ಅಜ್ಜಪ್ಪನ ಅಗತ್ಯವಿದೆ. ನಾವು ನಮ್ಮ ಮಕ್ಕಳು ಅನ್ನೋದನನ್ ಬಿಟ್ಟು ತಂದೆ-ತಾಯಿಯ ಜೊತೆಗೆ ಬದುಕಿದರೆ ತಮ್ಮ ತಮ್ಮ ಮಕ್ಕಳಿಗೆ ಅಜ್ಜ-ಅಜ್ಜಿಯ ಪ್ರೀತಿ ದಕ್ಕಲಿದೆ.
ಎನಿವೇ ರ‍್ಯಾಪ್, ಪಾಪ್, ಕಲ್ಚರ್ ಹಿಂದೆ ಹೋಗದೇ, ಸಮಾಜಕ್ಕೆ ಮತ್ತು ಜನರಿಗೆ ಒಂದು ಸಂದೇಶಭರಿತ ಆಲ್ಬಂ ಗೀತೆಯೊಂದನ್ನ ಕಟ್ಟಿಕೊಟ್ಟ ಐಟಿಬಿಟಿ ತಂಡಕ್ಕೆ ಹ್ಯಾಟ್ಸಾಫ್ ಹೇಳಬೇಕು. ಅದರಲ್ಲೂ `ಒಮ್ಮೆ ಹೇಳು ದೇವರೇ’ ಗೀತೆಗೆ ಸಾಹಿತ್ಯ ಗೀಚಿದ ಭಾನುಪ್ರಕಾಶ್ ಜೋಯಿಸ್ ಬಗ್ಗೆ ಒಂದೆರಡು ಮಾತು ಹೇಳಲೇಬೇಕು. ಅದು ಕರೊನಾ ಸಮಯ. ಲಾಕ್‍ಡೌನ್, ಸೀಲ್‍ಡೌನ್ ಕಾರಣದಿಂದ ಎಲ್ಲರೂ ಮನೆಯಲ್ಲೇ ಬಂಧಿಯಾಗಿದ್ದರು. ಆಗ ಕೆಲವರು ಕುರುಕಲು ತಿಂಡಿ ತಿನ್ಕೊಂಡು ಟೈಮ್‍ಪಾಸ್ ಮಾಡಿದ್ರು. ಇನ್ನೂ ಕೆಲವರು ಅದೇ ಟೈಮ್‍ನ ಉಪಯೋಗಿಸಿಕೊಂಡು ತಮ್ಮನ್ನ ತಾವು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡರು. ಅದರಂತೆ, ಭಾನುಪ್ರಕಾಶ್ ಜೋಯಿಸ್ ಲಾಕ್‍ಡೌನ್‍ನಲ್ಲಿ ಬರವಣಿಗೆಯಲ್ಲಿ ಬ್ಯುಸಿಯಾದರು. ಕರ್ನಾಟಕ ಅನ್‍ಲಾಕ್ ಆಗಿದ್ದೇ ತಡ ಗೆಳೆಯರಾದ ಕರ್ಣ ಹಾಗೂ ಆದರ್ಶ್ ಜೊತೆ ಸೇರಿ ತಮ್ಮದೊಂದು ತಂಡ ಕಟ್ಟಿಕೊಂಡು ಅಖಾಡಕ್ಕಿಳಿದರು. ಮ್ಯೂಸಿಕ್ ಆಲ್ಬಂಗಳ ರಚನೆಯಲ್ಲಿ ತೊಡಗಿದರು. ದಿಕ್ಕು ತಪ್ಪಿದ ದಾರಿ, ಎದುರಲಿ ಇರುವಾಗ ನೀನು, ಪರಪಂಚ ಹೆಸರಿನ ಆಲ್ಬಂನ ನಿರ್ಮಾಣ ಮಾಡಿದರು. ಅದ್ರಲ್ಲಿ ಎದುರಲಿ ಇರುವಾಗ ನೀನು ಆಲ್ಬಂ ಗೀತೆನಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಿಲೀಸ್ ಮಾಡಿಕೊಟ್ಟು ಶುಭಹಾರೈಸಿದ್ದರು. ಇದೀಗ `ಒಮ್ಮೆ ಹೇಳು ದೇವರೇ’ ಹಾಡನ್ನು ವಿಕಟಕವಿ ಯೋಗರಾಜ್ ಭಟ್ಟರು ಬಿಡುಗಡೆ ಮಾಡಿ ಹೊಸಬರ ಬೆನ್ನುತಟ್ಟಿದ್ದಾರೆ. ಸಿಂಪಲ್ ಸುನಿ, ವಿ ಮನೋಹರ್, ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಸೇರಿದಂತೆ ಇಂಡಸ್ಟ್ರಿಯ ಹಲವರು ಪ್ರೋತ್ಸಾಹಿಸಿದ್ದಾರೆ.
ಇಂಟ್ರೆಸ್ಟಿಂಗ್ ಅಂದರೆ `ಒಮ್ಮೆ ಹೇಳು ದೇವರೇ’ ಸಾಂಗ್ ಸೂಫಿ ಸ್ಟೈಲ್‍ನಲ್ಲಿದೆ. ಬಾಲಿವುಡ್‍ನ ರಾಕ್‍ಸ್ಟಾರ್, ಮೈ ನೇಮ್ ಈಸ್ ಖಾನ್, ಜೋದಾ ಅಕ್ಬರ್, ಸಿನಿಮಾದ ಹಾಡುಗಳನ್ನ ನೋಡಿ ಪ್ರೇರಣೆಗೊಂಡಿದ್ದ ಭಾನುಪ್ರಕಾಶ್ ಜೋಯಿಸ್, ಸೂಫಿ ಮ್ಯೂಸಿಕ್ ಫ್ಲೇವರ್ ನಲ್ಲಿ ಒಂದು ಹಾಡು ಮಾಡಬೇಕು ಎಂದುಕೊಂಡಿದ್ದರು. ಅದ್ರಂತೆ, `ಒಮ್ಮೆ ಹೇಳು ದೇವರೇ’ ಹಾಡನ್ನ ಸೂಫಿ ಜಾನರ್‍ನಲ್ಲಿ ಕಟ್ಟಿಕೊಟ್ಟಿದ್ದಾರೆ. ಬೆಂಗಳೂರು ಹಾಗೂ ಕುಮಟದಲ್ಲಿ ಚಿತ್ರೀಕರಣ ಮಾಡಿದ್ದು, ನಿರ್ವಾಣ ಬೀಚ್, ಅಲ್ಲಿನ ಹಳೆಯ ಮನೆಯೊಂದನ್ನ ಬಳಸಿಕೊಂಡಿದ್ದಾರೆ. ಶಾರ್ಟ್ ಫಿಲ್ಮ್, ಮ್ಯೂಸಿಕ್ ಆಲ್ಬಂ ಡೈರೆಕ್ಷನ್ ಮಾಡಿ ಅನುಭವ ಪಡೆದು ಸಿನಿಮಾ ನಿರ್ದೇಶನ ಮಾಡುವ ಕನಸು ಕಂಡಿರುವ ಭಾನುಪ್ರಕಾಶ್ ಜೋಯಿಸ್‍ಗೆ ಒಳ್ಳೆದಾಗಲಿ. ಅವರ ಕೈ ಚಳಕದಿಂದ ಮತ್ತಷ್ಟು ಮಗದಷ್ಟು ಆಲ್ಬಂ ಗೀತೆಗಳು, ಸಿನಿಮಾಗಳು ಹೊರಬರಲಿ ಅನ್ನೋದೇ ನಮ್ಮ ಆಶಯ.
Web Stories