CoronaLatestMain PostNational

ಓಮಿಕ್ರಾನ್ ಭೀತಿ: ಮುಂಬೈನಲ್ಲಿ 144 ಸೆಕ್ಷನ್ ಜಾರಿ- ರ‍್ಯಾಲಿ, ಮೆರವಣಿಗೆಗೆ ನಿಷೇಧ

ಮುಂಬೈ: ಕೋವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಡಿ.11, 12ರಂದು ನಗರದಲ್ಲಿ ಗುಂಪು ಸೇರುವಂತಹ ಯಾವುದೇ ರೀತಿಯ ರ‍್ಯಾಲಿ, ಮೆರವಣಿಗೆ ನಡೆಸದಂತೆ ನಿಷೇಧಿಸಲಾಗಿದೆ.

ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ ಓಮಿಕ್ರಾನ್ ಸೋಂಕಿತ 7 ಪ್ರಕರಣಗಳು ವರದಿಯಾಗಿವೆ. ಆ ಪೈಕಿ 3 ಪ್ರಕರಣಗಳು ಮುಂಬೈನಲ್ಲೇ ವರದಿಯಾಗಿವೆ. ನಗರದಲ್ಲಿ ಓಮಿಕ್ರಾನ್ ಸೋಂಕು ಮತ್ತಷ್ಟು ಹರಡುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಇದನ್ನೂ ಓದಿ: ಮಗು ಎತ್ತಿಕೊಂಡಿದ್ದ ವ್ಯಕ್ತಿ ಮೇಲೆ ಲಾಠಿ ಚಾರ್ಜ್ ಮಾಡಿದ್ದ ಪೊಲೀಸ್ ಅಮಾನತು

ಈ ಕುರಿತು ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಮಹಾರಾಷ್ಟ್ರದಲ್ಲಿ 3 ವರ್ಷದ ಮಗು ಸೇರಿದಂತೆ ಸೇರಿದಂತೆ 7 ಮಂದಿಯಲ್ಲಿ ಓಮಿಕ್ರಾನ್ ಇರುವುದು ದೃಢಪಟ್ಟಿದೆ. ಸೋಂಕಿತರ ಪೈಕಿ ಮೂವರು ತಾಂಜಾನಿಯಾ, ಯುಕೆ ಮತ್ತು ದಕ್ಷಿಣ ಆಫ್ರಿಕಾದಿಂದ ಪ್ರಯಾಣ ಬೆಳೆಸಿದ್ದವರಾಗಿದ್ದಾರೆ. ನಾಲ್ವರು ಸೋಂಕಿತರು ನೈಜೀರಿಯಾದ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ತಿಳಿಸಿದೆ.

ಏಳು ಮಂದಿಯಲ್ಲಿ ನಾಲ್ವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಆದರೆ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಸೋಂಕಿತರ ಪೈಕಿ ನಾಲ್ವರು ಕೋವಿಡ್ ಲಸಿಕೆಯ ಎರಡೂ ಡೋಸ್‍ಗಳನ್ನು ಪಡೆದುಕೊಂಡಿದ್ದಾರೆ. ಓರ್ವ ಒಂದು ಡೋಸ್ ಮಾತ್ರ ಪಡೆದುಕೊಂಡಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಮಗುವಿನಲ್ಲಿ ಓಮಿಕ್ರಾನ್ ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಮಹಾರಾಷ್ಟ್ರದಲ್ಲಿ ಇದುವರೆಗೆ ಒಟ್ಟು 17 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.

Leave a Reply

Your email address will not be published.

Back to top button