ಬೆಂಗಳೂರು: ಕರ್ನಾಟಕದಲ್ಲಿ ಓಮಿಕ್ರಾನ್ ಸೋಂಕಿತ ಬಿಡುಗಡೆ ಆಗುವ ಹೊತ್ತಿನಲ್ಲೇ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಇಂದು ಮತ್ತೊಂದು ಓಮಿಕ್ರಾನ್ ಸೋಂಕು ಪ್ರಕರಣ ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 3ಕ್ಕೇರಿದೆ.
ಡಿ.1ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದ 34 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಓಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ. ಈತ ಬೊಮ್ಮನಹಳ್ಳಿಯ ಅಂಜನಾಪುರ ನಿವಾಸಿಯಾಗಿದ್ದಾನೆ. ಇದನ್ನೂ ಓದಿ: ಆಂಧ್ರ, ಚಂಡೀಗಢದಲ್ಲಿ ಖಾತೆ ತೆರೆದ ಓಮಿಕ್ರಾನ್- ದೇಶದಲ್ಲಿ 35ಕ್ಕೇರಿದ ಸಂಖ್ಯೆ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈತನಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬಂದಿತ್ತು. ನಂತರ ಐಸೊಲೇಷನ್‍ನಲ್ಲಿದ್ದ ಈತನನ್ನು ಮತ್ತೆ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ. ನಂತರ ಈತನ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್‍ಗೆ ಕಳುಹಿಸಿದಾಗ ಓಮಿಕ್ರಾನ್ ಇರುವುದು ಪತ್ತೆಯಾಗಿದೆ.
ಈತನ ಪ್ರಾಥಮಿಕ ಸಂಪರ್ಕದಲ್ಲಿ ಐವರು ಹಾಗೂ ದ್ವಿತೀಯ ಸಂಪರ್ಕದಲ್ಲಿ 15 ಮಂದಿ ಇದ್ದರು. ಅವರ ಮಾದರಿಗಳನ್ನೂ ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಕೇವಲ 2 ಗಂಟೆಯಲ್ಲಿ ಓಮಿಕ್ರಾನ್ ಪತ್ತೆ ಮಾಡುವ ಕಿಟ್ ಅಭಿವೃದ್ಧಿ
ಆಂಧ್ರಪ್ರದೇಶ, ಚಂಡೀಗಢದಲ್ಲೂ ಇಂದು ಓಮಿಕ್ರಾನ್ ಖಾತೆ ತೆರೆದಿದೆ. ಎರಡೂ ರಾಜ್ಯಗಳಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ. ಒಟ್ಟಾರೆ ದೇಶದಲ್ಲಿ ಓಮಿಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆ 36ಕ್ಕೆ ಏರಿದೆ.