– ಡೀಸೆಲ್ ಖಾಲಿಯಾಗಿ ಹಣ, ಆಹಾರವಿಲ್ಲದೇ ಮೀನುಗಾರರು ಪರದಾಟ
ಉಡುಪಿ: ಮಲ್ಪೆ ಆಳ ಸಮುದ್ರದಲ್ಲಿ ಓಮನ್ ಬೋಟ್ ಪತ್ತೆಯಾಗಿದೆ. ಉಡುಪಿ ಸೇಂಟ್ ಮೇರಿಸ್ ದ್ವೀಪ ಸಮೀಪ ಓಮನ್ ಮೂಲದ ಮೀನುಗಾರಿಕಾ ಬೋಟ್ ಕಂಡುಬಂದಿದೆ.
ಓಮನ್ ಹಾರ್ಬರ್‌ನಿಂದ ತಪ್ಪಿಸಿಕೊಂಡು ಭಾರತೀಯ ಸಮುದ್ರಕ್ಕೆ ಬೋಟ್ ಬಂದಿದೆ. ಬೋಟ್‌ನಲ್ಲಿ ತಮಿಳುನಾಡು ಮೂಲದ ಮೀನುಗಾರರು ಪತ್ತೆಯಾಗಿದ್ದಾರೆ. ಇದರಲ್ಲಿ ತಮಿಳುನಾಡು ಮೂಲದ ತಂಡ ಮೀನುಗಾರಿಕ ವೃತ್ತಿ ನಡೆಸುತ್ತಿತ್ತು.
ಸಂಬಳ ಹಾಗೂ ಆಹಾರ ನೀಡದೆ ಓಮನ್ ಬೋಟ್ ಮಾಲೀಕ ಸತಾಯಿಸುತ್ತಿದ್ದ. ಪಾಸ್‌ಪೋರ್ಟ್ ವಶಕ್ಕೆ ಪಡೆದು ಚಿತ್ರಹಿಂಸೆ ನೀಡಿದ್ದ. ಪ್ರಾಣ ಭಯದಿಂದ ಓಮನ್ ಹಾರ್ಬಾರ್‌ನಿಂದ ಮೀನುಗಾರರು ತಪ್ಪಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.
ಸಮುದ್ರ ಮಾರ್ಗದಲ್ಲಿ 4 ಸಾವಿರ ಕಿಮೀ ಕ್ರಮಿಸಿ ಭಾರತದ ಸಮುದ್ರ ತೀರಕ್ಕೆ ವಿದೇಶಿ ಬೋಟ್ ಬಂದಿತ್ತು. ಕಾರವಾರ ದಾಟಿ ಮಲ್ಪೆಯತ್ತ ಪ್ರಯಾಣ ಬೆಳೆಸಿದೆ. ಡೀಸೆಲ್ ಖಾಲಿಯಾಗಿ ಹಣ, ಆಹಾರವಿಲ್ಲದೆ ಮೀನುಗಾರರು ಪರದಾಡಿದ್ದಾರೆ.
ಮೀನುಗಾರರ ಮಾಹಿತಿಯಿಂದ ಬೋಟ್ ಹಾಗೂ ಮೀನುಗಾರರನ್ನು ಕೋಸ್ಟ್ ಗಾರ್ಡ್ ವಶಕ್ಕೆ ಪಡೆದಿದ್ದಾರೆ. ಅಮರ್ಥ್ಯ ಕೋಸ್ಟ್ ಗಾರ್ಡ್ಶಿಪ್‌ನಿಂದ ವಿದೇಶಿ ಹಡಗು ಹಾಗೂ ಮೀನುಗಾರರನ್ನು ವಶಕ್ಕೆ ಪಡೆಯಲಾಗಿದೆ. ಪಾಸ್‌ಪೋರ್ಟ್ ಇಲ್ಲದೆ ವಿದೇಶಿ ಹಡಗಿನಲ್ಲಿ ಗಡಿ ದಾಟಿದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ. ಕೋಸ್ಟ್ ಗಾರ್ಡ್ ಸಿಬ್ಬಂದಿ ಮೀನುಗಾರರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.