ಸಾಯಿಕುಮಾರ್ ಅವರ ಖಡಕ್ ಡೈಲಾಗ್ ಕೇಳೋಕೆ ಅದೇನೋ ಒಂಥರ ಖುಷಿ. ತನ್ನ ಡೈಲಾಗ್ ನಿಂದಲೇ ಡೈಲಾಗ್ ಕಿಂಗ್ ಎನಿಸಿಕೊಂಡವರು. ಇದೀಗ ಅದೇ ಖಡಕ್ ಡೈಲಾಗ್ ಹೊಡೆಯಲು ರೆಡಿಯಾಗಿದ್ದಾರೆ. ಹೌದು ಸಾಯಿಕುಮಾರ್ ಅಭಿನಯದ ‘ಜಗ್ಗಿ ಜಗನ್ನಾಥ್’ ಸಿನಿಮಾ ಇದೇ ತಿಂಗಳ 28ಕ್ಕೆ ತೆರೆ ಕಾಣಲಿದೆ. ಅದಕ್ಕೂ ಮುನ್ನ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.
ಟ್ರೇಲರ್ ನೋಡಿದವರಿಗೆ ಸಿನಿಮಾ ಹೇಗಿರಲಿದೆ ಎಂಬುದು ಅರ್ಥವಾಗಿದೆ. ಪಕ್ಕಾ ಆ್ಯಕ್ಷನ್ ಕಮ್ ಲವ್ ಸ್ಟೋರಿ. ಸಾಯಿ ಕುಮಾರ್ ಇದ್ರೆ ಅಲ್ಲೊಂದು ರೌಡಿಸಂ ಡೈಲಾಗ್ ಗಳ ಸುರಿಮಳೆ ಅಲ್ವೆ. ಅದೇ ರೀತಿ ಸಿನಿಮಾದಲ್ಲಿ ಗನ್ನು, ಮಚ್ಚು-ಲಾಂಗು ಬೀಸುತ್ತೆ, ರಕ್ತ ಹರಿಯುತ್ತೆ, ಡೈಲಾಗ್ ಗಳ ಸುರಿಮಳೆ ಸುರಿಯುತ್ತೆ. ಹೆಚ್ಚು ರೌಡಿಸಂ ದೃಶ್ಯಗಳೆ ಟ್ರೇಲರ್ ನಲ್ಲಿ ಓಡಾಡುತ್ತಿವೆ. ಇದರ ನಡುವೆ ಕಾಮಿಡಿ ಜೊತೆಗೆ ನಾಯಕನಿಗೊಂದು ಲವ್ ಸ್ಟೋರಿ ಇರುವುದು ಟ್ರೇಲರ್ ನಲ್ಲಿ ವ್ಯಕ್ತವಾಗಿದೆ.
ನಾಯಕ ಲಿಕಿತ್ ರಾಜ್ ಅಭಿನಯ ಕೂಡ ಮೆಚ್ಚುವಂತಿದೆ. ಪಕ್ಕಾ ಮಾಸ್ ಸ್ಟೋರಿಗೆ ಮ್ಯಾಚ್ ಆಗಿದ್ದಾರೆ. ಇನ್ನು ಸಿನಿಮಾದಲ್ಲಿ ತಾಯಿ-ಮಗನ ಸೆಂಟಿಮೆಂಟ್ ಅಂಶ ಕೂಡ ಇದೆ. ನಾಯಕ ಮತ್ತು ಖಡಕ್ ಪೊಲೀಸ್ ಆಫೀಸರ್ ಆಗಿರುವ ಸಾಯಿ ಪ್ರಕಾಶ್ ನಡುವೆ ಜುಗಲ್ ಬಂದಿ ಕ್ರಿಯೇಟ್ ಆಗುವ ದೃಶ್ಯಗಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ. ನಾಯಕ ರೌಡಿಸಂ, ಪ್ರೇಯಸಿಯ ಮುಗ್ಧತೆ, ತಾಯಿಯನ್ನ ಯಾರೋ ಕೊಲ್ಲುವುದು, ನಾಯಕ ಮುಂದೇನು ಮಾಡ್ತಾನೆ ಎಂಬೆಲ್ಲಾ ಪ್ರಶ್ನೆಗಳನ್ನು ಹುಟ್ಟುವಂತೆ ಮಾಡಿದ್ದಾರೆ ಓಂ ಸಾಯಿ ಪ್ರಕಾಶ್. ಇದೇ 28 ರಂದು ಸಿನಿಮಾ ತೆರೆಗೆ ಬರಲಿದ್ದು, ಈ ಎಲ್ಲಾ ಪ್ರಶ್ನೆಗಳಿಗೆ ಥಿಯೇಟರ್ ನಲ್ಲೆ ಉತ್ತರ ಕಂಡುಕೊಳ್ಳಬೇಕಿದೆ.
ಶ್ರೀಮೈಲಾರಲಿಂಗೇಶ್ವರ ಮೂವೀಸ್ ಲಾಂಛನದಲ್ಲಿ ಹೆಚ್.ಜಯರಾಜು ಹಾಗೂ ಜಿ.ಶಾರದ ನಿರ್ಮಾಣದ ಚಿತ್ರವಿದು. ಎ.ಎಂ.ನೀಲ್ ಸಂಗೀತ ನೀಡಿದ್ದಾರೆ. ರೇಣುಕುಮಾರ್ ಛಾಯಾಗ್ರಹಣವಿದ್ದು, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಸಾಯಿ ಸರ್ವೇಶ್ ಸಾಹಿತ್ಯ ನೀಡಿದ್ದಾರೆ. ಬಾಬು ಸಂಕಲನ ಮಾಡಿದ್ದಾರೆ. ಸಾಯಿ ಕುಮಾರ್ ಹಾಗೂ ಲಿಖಿತ್ ರಾಜ್ ಜತೆಗೆ ತಬಲಾ ನಾಣಿ, ಪದ್ಮಜಾ ರಾವ್, ಲಯ ಕೋಕಿಲ, ಮೈಕೋ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.