ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ

Public TV
1 Min Read
OM BIRLA

ನವದೆಹಲಿ: ಬಿಜೆಪಿ ಸಂಸದ ಓಂ ಬಿರ್ಲಾ ಅವರು 17ನೇ ಲೋಕಸಭೆಗೆ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

ಸೋಮವಾರ ಲೋಕಸಭಾ ಅಧಿವೇಶನ ಆರಂಭವಾಗಿದ್ದು, ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಓಂ ಬಿರ್ಲಾ ಅವರು ಎರಡನೇ ಬಾರಿ ರಾಜಸ್ಥಾನದ ಸಂಸದರಾಗಿ ಆಯ್ಕೆಯಾಗಿದ್ದು, 17ನೇ ಲೋಕಸಭೆಗೆ ಸ್ಪೀಕರ್ ಆಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಸುಮಿತ್ರಾ ಮಹಾಜನ್ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.

1560834234 Om Birla ANI

ಮಾಧ್ಯಮಗಳೊಂದಿಗೆ ಮಾತನಾಡಿದ ಬಿರ್ಲಾ ಪತ್ನಿ ಅಮಿತ್ ಬಿರ್ಲಾ, ನಮ್ಮ ಕುಟಂಬಕ್ಕೆ ಹೆಮ್ಮೆ ತರುವಂತಹ ವಿಚಾರವಿದು. ಬಹಳ ಸಂತೋಷವಾಗಿದೆ. ಇವರನ್ನು ಸ್ಪಿಕರ್ ಆಗಿ ಆಯ್ಕೆ ಮಾಡಿದ ಕ್ಯಾಬಿನೆಟ್‍ಗೆ ಧನ್ಯವಾದಗಳು ಎಂದರು.

ಬಿರ್ಲಾ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ರಾಮ್‍ನಾರಾಯಣ್ ಮೀನಾ ವಿರುದ್ಧ 2.5 ಲಕ್ಷ ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು.

56 ವರ್ಷದ ಬಿರ್ಲಾ, ಬಿಜೆಪಿ ಯೂತ್ ವಿಭಾಗದೊಂದಿಗೆ ನಿರಂತರ ಸಂಬಂಧ ಹೊಂದಿದ್ದು, ಸತತ ಎರಡು ಬಾರಿ ರಾಜಸ್ಥಾನ ಕೋಟಾದ ಶಾಸಕರಾಗಿದ್ದರು. ಅಲ್ಲದೆ ಬಿಜೆಪಿ ಹಿರಿಯ ನಾಯಕ ಹಾಗೂ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಆಪ್ತರಾಗಿದ್ದಾರೆ.

ನೂತನ ಸ್ಪೀಕರ್ ಅಧಿಕಾರಕ್ಕೆ ಬಂದ ನಂತರ ತಾತ್ಕಾಲಿಕ ಸ್ಪೀಕರ್ ಆಗಿ ಲೋಕಸಭೆಯಲ್ಲಿ 300 ಸಂಸದರಿಗೆ ಪ್ರಮಾಣ ವಚನ ನೀಡಿದ ವೀರೇಂದ್ರ ಕುಮಾರ್‍ರವರು ಕರ್ತವ್ಯದಿಂದ ಕೆಳಗಿಳಿಯಲಿದ್ದಾರೆ.

ಈ ಬಾರಿ ಸಂಸದೆ ಮನೇಕಾ ಗಾಂಧಿಯವರನ್ನು ಸಂಪುಟದಿಂದ ಕೈ ಬಿಡಲಾಗಿದೆ. ಮನೇಕಾ ಗಾಂಧಿಯವರೇ ಲೋಕಸಭಾ ಸ್ಪೀಕರ್ ಆಗಿ ನೇಮಕಗೊಳ್ಳಲಿದ್ದಾರೆಂಬ ಸುದ್ದಿಯೊಂದು ಬಲವಾಗಿ ಹರಿದಾಡಿತ್ತು. ತಮ್ಮನ್ನು ಸಂಪುಟದಿಂದ ಕೈ ಬಿಟ್ಟ ಕುರಿತು ಇದೂವರೆಗೂ ಮನೇಕಾ ಗಾಂಧಿ ಬಹಿರಂಗವಾಗಿ ಹೇಳಿಕೆ ನೀಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *