– ಬೆಳ್ಳಿ ಪದಕಕ್ಕೆ ಅಶಿಶ್ ತೃಪ್ತಿ
ಟೋಕಿಯೊ: ಒಲಿಪಿಂಕ್ ಟೆಸ್ಟ್ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಶಿವ ಥಾಪಾ ಹಾಗೂ ಪೂಜಾ ರಾಣಿ ಚಿನ್ನದ ಪದಕ್ಕೆ ಮುತ್ತಿಟ್ಟರೆ, ಅಶಿಶ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ನಾಲ್ಕು ಬಾರಿಯ ಏಷ್ಯನ್ ಪದಕ ವಿಜೇತ ಶಿವ ಥಾಪಾ 63 ಕೆಜಿ ತೂಕ ವಿಭಾಗದಲ್ಲಿ ಕಜಕಿಸ್ತಾನ ರಾಷ್ಟ್ರೀಯ ಚಾಂಪಿಯನ್ ಮತ್ತು ಏಷ್ಯನ್ ಕಂಚಿನ ಪದಕ ವಿಜೇತ ಸಂತಾಲಿ ಟೋಲ್ಕಾಯೆವ್ ಅವರನ್ನು 5-0 ಅಂಕಗಳಿಂದ ಸೋಲಿಸಿದರು. ಶಿವ ರಾಷ್ಟ್ರೀಯ ಚಾಂಪಿಯನ್ ಹಾಗೂ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗೆದ್ದಿದ್ದರು.
ಮತ್ತೊಂದೆಡೆ, ಏಷ್ಯನ್ ಕ್ರೀಡಾಕೂಟದ ಮಾಜಿ ಕಂಚಿನ ಪದಕ ವಿಜೇತೆ ಪೂಜಾ ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ ಅವರನ್ನು ಸೋಲಿಸಿದರು. ಈ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಪೂಜಾ ಬೆಳ್ಳಿ ಪದಕವನ್ನು ಗೆದ್ದಿದ್ದರು.
ಆಶಿಶ್ 69 ಕೆಜಿ ತೂಕ ವಿಭಾಗದಲ್ಲಿ ಜಪಾನ್‍ನ ಸೆವೊನ್ ಒಕಾಜಾವಾ ವಿರುದ್ಧ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಬುಧವಾರ ನಡೆದ ಸೆಮಿಫೈನಲ್ ಶಿವ ಥಾಪಾ ಜಪಾನ್‍ನ ದೈಸುಕಿ ನಾರಿಮತ್ಸು ಎದುರು ಭರ್ಜರಿ ಗೆಲುವು ಸಾಧಿಸಿದ್ದರು. ಪೂಜಾ ರಾಣಿ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಬ್ರೆಜಿಲ್‍ನ ಬೀಟ್‍ರಿಜ್ ಸೋರೆಸ್ ಎದುರು ಜಯದ ನಗೆ ಬೀರಿದ್ದರು.
ಇದಕ್ಕೂ ಮುನ್ನ ಮಹಿಳೆಯರ 51 ಕೆಜಿ ತೂಕದ ವಿಭಾಗದಲ್ಲಿ ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ನಿಖತ್ ಜರೀನ್ ಮತ್ತು 60 ಕೆಜಿ ವಿಭಾಗದಲ್ಲಿ ಸಿಮ್ರನ್‍ಜೀತ್ ಕೌರ್ ಸೆಮಿಫೈನಲ್ ನಲ್ಲಿ ನಿರಾಸೆ ಅನುಭವಿಸಿ ಕಂಚಿನ ಪದಕ ಗಳಿಸಿದ್ದಾರೆ. ನಾಲ್ಕರ ಘಟ್ಟದಲ್ಲೇ ಸೋತ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಸುಮಿತ್ ಸಂಗ್ವಾನ್ 91 ಕೆಜಿ ವಿಭಾಗದಲ್ಲಿ ಮತ್ತು ವಹಲಿಂಪುಯಾ 75 ಕೆಜಿ ಕೂಡ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.