ಚಿಕ್ಕಬಳ್ಳಾಪುರ: ಒಎಲ್‍ಎಕ್ಸ್ ಹಳೆಯ ಹಾಗೂ ಬೇಡವಾದ ಗೃಹಬಳಕೆ ವಸ್ತುಗಳನ್ನ ಮಾರಾಟ ಮಾಡುವುದಕ್ಕೆ ಇರುವ ಆನ್‍ಲೈನ್ ತಾಣವಾಗಿದೆ. ಆದರೆ ಅದೇ ಆನ್‍ಲೈನ್ ತಾಣವನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೆಲ ಸೈಬರ್ ಕಳ್ಳರು, ಸುಲಭವಾಗಿ ಅಮಾಯಕ ಗ್ರಾಹಕರ ಬಳಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿ ವಂಚನೆ ಮಾಡುತ್ತಿದ್ದಾರೆ.
ಒಎಲ್‌ಎಕ್ಸ್‌ನಲ್ಲಿ ಓಮ್ನಿ ಕಾರು ನೋಡಿದ ಬಳ್ಳಾರಿ ಮೂಲದ ದೊಡ್ಡನಾಯಕ್ ಹಾಗೂ ಕೃಷ್ಣನಾಯಕ್ ಅವರು ಖದೀಮರ ಕೃತ್ಯಕ್ಕೆ ಈಗ ಕಣ್ಣೀರು ಹಾಕುವಂತಾಗಿದೆ. ಹೌದು. ಒಎಲ್‌ಎಕ್ಸ್‌ನಲ್ಲಿ ಕೆಎ 17 ಬಿ 5946 ನಂಬರಿನ ಒಮ್ನಿ ಕಾರು ಕಂಡಿದ್ದೇ ತಡ ಕಾರು ಚೆನ್ನಾಗಿದೆ ಅಂತ ರೇಟ್ ನೋಡಿದ್ದಾರೆ. ಅಲ್ಲಿ ಓಮ್ನಿ ಕಾರಿಗೆ ಕೇವಲ 60 ಸಾವಿರ ರೂಪಾಯಿ ಅಂತ ಹಾಕಲಾಗಿತ್ತು. ಓಮ್ನಿ ಕಾರು ನೋಡೋಕೆ ಚೆನ್ನಾಗಿದೆ ಅಂತ ಅದರಲ್ಲಿದ್ದ ಕಾಂಟಾಕ್ಟ್ ನಂಬರಿಗೆ ದೊಡ್ಡನಾಯಕ್, ಕೃಷ್ಣನಾಯಕ್ ಕರೆ ಮಾಡಿದ್ದಾರೆ. ಆ ಕಡೆಯಿಂದ ಮಾತನಾಡಿದವನು ನಾನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್‍ಎಫ್ ಆಫೀಸರ್ ವಿಜಯ್ ಕುಮಾರ್, ಕಾರಿನ ರೇಟ್ 60 ಸಾವಿರ ಅಂದಿದ್ದಾನೆ. ಈ ಕಡೆಯಿಂದ ಚರ್ಚೆಗಿಳಿದ ದೊಡ್ಡನಾಯಕ್ ಅಷ್ಟೊಂದು ಜಾಸ್ತಿ ಸರ್.. 35 ಸಾವಿರ ಕೊಡ್ತೀನಿ ಅಂದಿದ್ದಾರೆ. ಅಷ್ಟೇ ಮರುಮಾತನಾಡದೆ ವಿಜಯ್ ಕುಮಾರ್ ಒಪ್ಪಿಕೊಂಡಿದ್ದನು.
Advertisement
Advertisement
ಹಣ ಗೂಗಲ್ ಪೇ ಮಾಡಿ, ಗಾಡಿ ನಿಮ್ಮ ಜಾಗಕ್ಕೆ ನಾನೇ ಕಳಿಸಿಕೊಡ್ತೀನಿ ಸುಮ್ನೆ ಯಾಕ್ ನೀವು ಇಲ್ಲಿಗೆ ಬರೋದು ಅಂತ ಹೇಳಿದ್ದಾನೆ. ಅಲ್ಲದೆ ಮೊದಲು 5,100 ರೂ. ಹಾಕಿ ಸಾಕು ಅಮೇಲೆ ಉಳಿದ ಹಣ ಗಾಡಿ ಬಂದ ಮೇಲೆ ಹಾಕಿ ಎಂದು ವಿಜಯ್ ಕುಮಾರ್, ದೊಡ್ಡನಾಯಕ್ ಮತ್ತು ಕೃಷ್ಣನಾಯಕ್ ಬಳಿ ಹೇಳಿದ್ದಾನೆ. ಹೀಗೆ ಮೊದಲು 5,100 ರೂಪಾಯಿ ಆನ್‍ಲೈನ್ ಟ್ರಾನ್ಸ್‌ಫರ್ ಮಾಡಿಸಿಕೊಂಡ ಖದೀಮ, ಇನ್ನೇನು ಕಾರು ನಿಮ್ಮ ಊರು ಕಡೆ ಬರ್ತಿದೆ ಅಂತ ಒಂದು ಕೊರಿಯರ್‍ನಲ್ಲಿ ವಾಹನದ ದಾಖಲೆ ಪತ್ರ ಜೊತೆಗೆ ಬರೆದು ಅದನ್ನ ವಾಟ್ಸಾಪ್ ಮಾಡಿದ್ದಾನೆ. ಉಳಿದ ಹಣವನ್ನ ನಮ್ಮ ಸೀನಿಯರ್ ಆಫೀಸರ್ ನವೀನ್ ಸಿಂಗ್ ಅಕೌಂಟ್‍ಗೆ ಹಾಕಿ ಅಂದಿದ್ದಾನೆ.
Advertisement
Advertisement
ಆದರೆ ಆ ಕಡೆಯಿಂದ ದೊಡ್ಡನಾಯಕ್ ಗಾಡಿ ಬಂದ ಮೇಲೆ ಹಣ ಕಳಿಸ್ತೀವಿ ಅಂದಾಗ, ಇಲ್ಲ..ಇಲ್ಲ.. ಈಗಲೇ ಹಾಕಿ ಇಲ್ಲ ಅಂದರೆ ಗಾಡಿ ವಾಪಾಸ್ ಕರೆಸಿಕೋತೀವಿ ಅಂತ ಹೆದರಿಸಿದ್ದಾರು. ಹೀಗಾಗಿ ದೊಡ್ಡನಾಯಕ್, ಕೃಷ್ಣನಾಯಕ್ ಒಮ್ಮೆ 15 ಸಾವಿರ, ಬಳಿಕ ಐದೈದು ಸಾವಿರ ಎರಡು ಮೂರು ಸಲ ಕಳುಹಿಸಿದ್ದಾರೆ. ಹೀಗೆ ಒಟ್ಟು 35 ಸಾವಿರ ಹಣವನ್ನ ಆನ್‍ಲೈನ್ ಮೂಲಕ ಟ್ರಾನ್ಸ್‌ಫರ್ ಮಾಡಿದ್ದಾರೆ. ಆದರೆ ಕೊನೆಗೆ ಗಾಡಿ ಬರಲಿಲ್ಲ ಯಾಕೆ ಎಂದು ಫೋನ್ ಮಾಡಿದರೆ ಇನ್ನೂ ದುಡ್ಡು ಹಾಕಿ ಅಂತ ಖದೀಮರು ಕೇಳುತ್ತಿದ್ದಾರೆ. ಹೀಗಾಗಿ ತಾವು ವಂಚನೆಗೆ ಒಳಗಾಗಿರೋದು ಗೊತ್ತಾಗಿ ಹಣ ಕಳೆದುಕೊಂಡ ದೊಡ್ಡನಾಯಕ್, ಕೃಷ್ಣನಾಯಕ್ ಸದ್ಯ ಕಣ್ಣೀರು ಸುರಿಸುವಂತಾಗಿದೆ.
ಈ ಇಬ್ಬರು ಬಳ್ಳಾರಿಯಿಂದ ಬಂದು ಮಂಡ್ಯದ ಬಳಿ ಕಬ್ಬು ಕಟಾವು ಕೆಲಸ ಮಾಡುತ್ತಾ ಒಂದಷ್ಟು ಹಣ ಕೂಡಿಟ್ಟುಕೊಂಡಿದ್ದರು. ಉಳಿದ ಹಣವನ್ನ 10 ರೂಪಾಯಿ ಬಡ್ಡಿಯಂತೆ ಸಾಲ ಪಡೆದು ಈ ಆನ್‍ಲೈನ್ ವಂಚಕರಿಗೆ ಹಾಕಿದ್ದರು. ಹೀಗಾಗಿ ಹಣ ಕಳೆದುಕೊಂಡು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ ಬಳಿ ಹೋದರೆ ಏನೂ ಉಪಯೋಗವಾಗಲಿಲ್ಲ. ಅಯ್ಯೋ ಹೋಗಿ ದಿನ ಈ ಥರ ಹತ್ತಾರು ಕೇಸು ಬರುತ್ತೆ. ನೀವು ಮೋಸ ಹೋಗಿದ್ದೀರಾ ಆ ಥರ ಸಿಐಎಸ್‍ಎಫ್‍ನವರು ಯಾರೂ ಇಲ್ಲಿಲ್ಲ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಹೇಳಿ ಕಳುಹಿಸಿದ್ದಾರೆ. ಆದರೆ ಪೊಲೀಸರ ನೆರವು ಸಿಗುತ್ತೇನೋ ಅಂತ ಆಸೆಗಣ್ಣಿನಿಂದ ಬಂದಿದ್ದ ಯುವಕರು ಕೊನೆಗೆ ಅಳುತ್ತಲೇ ವಾಪಾಸ್ ಹೋಗಿದ್ದಾರೆ.
ಕಳೆದ 3 ತಿಂಗಳಲ್ಲಿ ಇದೇ ತರ ಒಂದಲ್ಲ ಎರಡಲ್ಲ ನೂರಾರು ಕೇಸ್‍ಗಳು ನಡೆದಿದ್ದು, ಹಣ ಕಳೆದುಕೊಳ್ಳುತ್ತಿರುವವರು ಕೆಐಎಎಲ್ ಪೊಲೀಸ್ ಠಾಣೆ ಬಳಿ ಬರುತ್ತಿದ್ದಾರೆ. ಕೆಐಎಎಲ್ ಪೊಲೀಸ್ ಠಾಣೆಯಲ್ಲಿ ಒಎಲ್‍ಎಕ್ಸ್ ವಂಚನೆ ಪ್ರಕರಣಗಳಿಗಂತಲೇ ದೊಡ್ಡದಾದ ಹೊಸ ಫೈಲ್ ಇಡಲಾಗಿದೆ. ಅದೆಲ್ಲೋ ಕೂತು ಆನ್‍ಲೈನ್ ಮೂಲಕ ನಯವಂಚಕ ಮಾತುಗಳಿಂದ ವಂಚನೆ ಮಾಡೋ ಈ ಖದೀಮರ ಕೃತ್ಯಕ್ಕೆ ಬ್ರೇಕ್ ಹಾಕಬೇಕಾದ ಪೊಲೀಸರು ಮಾತ್ರ ತಮ್ಮ ಕೈಲಾಗಲ್ಲ ಅಂತ ಕೈ ಕಟ್ಟಿ ಕುಳಿತಿದ್ದು, ಖದೀಮರ ಆಟ ಮುಂದುವರಿಯುತ್ತಲೇ ಇದೆ. ಹೀಗಾಗಿ ಆನ್‍ಲೈನ್‍ನಲ್ಲಿ ವ್ಯವಹರಿಸೋ ಮುನ್ನ ಹತ್ತು ಬಾರಿ ಯೋಚಿಸಿಬೇಕಿದೆ.