ಕಾರವಾರ: ಅತ್ತ ಹುಚ್ಚನಾಯಿಗಳ ಕಾಟ ಇತ್ತ ನಾಯಿ ಕಚ್ಚಿದರೆ ಚಿಕಿತ್ಸೆ ಪಡೆಯಲು ಆಸ್ಪತ್ರಗೆ ಹೋದರೆ ಔಷಧಿ ಸಿಗದೆ ಪರದಾಟ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ಹುಚ್ಚು ನಾಯಿ ಕಾಟ ಜಾಸ್ತಿಯಾಗಿದ್ದು ಓರ್ವ ವೃದ್ಧೆ ಇಂದು ಮೃತಪಟ್ಟರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ.
ಮುಂಡಳ್ಳಿ ಗ್ರಾಮದ ನಿವಾಸಿ ವೃದ್ಧೆ ಜಟ್ಟಮ್ಮ ಹುಚ್ಚುನಾಯಿ ಕಡಿತದಿಂದ ಸಾವನ್ನಪ್ಪಿದ್ದಾರೆ. ವೃದ್ಧೆಯ ಮಗ ಶ್ರೀನಿವಾಸ್ ಕುಪ್ಪಯ್ಯ(60), ಪಕ್ಕದ ಮನೆಯ ರಿತೀಶ್(18) ಹಾಗೂ ಜ್ಯೋತಿ ಅವರಿಗೂ ಕೂಡ ಈ ಹುಚ್ಚುನಾಯಿ ಕಚ್ಚಿದೆ.
ಹುಚ್ಚುನಾಯಿ ಕಡಿತಕ್ಕೆ ಒಳಗಾದ ಮೂವರಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹಾಗೆಯೇ ಯುವತಿಗೆ ಚಿಕ್ಕಪುಟ್ಟ ಗಾಯವಾಗಿದ್ದು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಭಟ್ಕಳದ ಮುಂಡಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನಾಯಿಗಳ ಕಾಟ ಮಿತಿಮೀರಿದೆ. ಈ ಹಿಂದೆ ನಾಯಿಗಳ ಹಿಂಡು ಮಕ್ಕಳ ಹಾಗೂ ಮಹಿಳೆಯರ ಮೇಲೆ ದಾಳಿ ಮಾಡಿತ್ತು. ಹೀಗಾಗಿ ಸ್ಥಳೀಯರು ನಾಯಿಯನ್ನು ಹಿಡಿಯುವಂತೆ ಗ್ರಾಮಪಂಚಾಯ್ತಿಗೆ ಹಾಗೂ ಸ್ಥಳೀಯ ಆಡಳಿತಕ್ಕೆ ಮನವಿ ಸಹ ಮಾಡಿದ್ದರು. ಆದರೆ ಈ ಬಗ್ಗೆ ಯಾವ ಅಧಿಕಾರಿಯೂ ಈವರೆಗೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಾಯಿಗಳನ್ನು ಸ್ಥಳಾಂತರಿಸುವ ಅಥವಾ ಸಂತಾನ ಹರಣ ಚಿಕಿತ್ಸೆ ಮಾಡಿಸುವ ಪ್ರಯತ್ನ ಸಹ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ ನಾಯಿ ಕಚ್ಚಿದರೆ ಚಿಕಿತ್ಸೆ ನೀಡುವುದಿರಲಿ ಇದಕ್ಕೆ ಸೂಕ್ತ ಚುಚ್ಚುಮದ್ದು ಸಹ ತಾಲೂಕು ಆಸ್ಪತ್ರೆಯಲ್ಲಿ ಸಂಗ್ರಹವಿಲ್ಲ. ಕೇವಲ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಅಥವಾ ಉಡುಪಿಗೆ ಕೊಂಡೊಯ್ಯುವಂತೆ ಸಲಹೆ ಮಾಡುತ್ತಾರೆ ಇಲ್ಲಿನ ವೈದ್ಯರು. ಇಂದು ನಾಯಿ ಕಚ್ಚಿದ್ದರಿಂದ ವೃದ್ಧೆ ಜೊತೆ ಮಗ ಹಾಗೂ ಮತ್ತೊಬ್ಬ ಯುವಕ ಸಹ ಗಂಭೀರ ಗಾಯಗೊಂಡಿದ್ದು, ಚುಚ್ಚುಮದ್ದು ಹಾಗೂ ಚಿಕಿತ್ಸೆ ನೀಡದೇ ತಾಲೂಕು ಆಸ್ಪತ್ರೆಯ ವೈದ್ಯರು ಮಂಗಳೂರಿಗೆ ಹೋಗುವಂತೆ ಸಲಹೆ ನೀಡುವ ಮೂಲಕ ಒಂದು ಜೀವ ಬಲಿಯಾಗಲು ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.