ತುಮಕೂರು: ವೃದ್ಧೆಯೊಬ್ಬರು ಲಾರಿ ಅಡಿಗೆ ಸಿಲುಕಿ ವಿಲವಿಲನೆ ಒದ್ದಾಡಿದ ಹೃದಯ ವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.
ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಈ ಮನಕಲಕುವ ದುರಂತ ಸಂಭವಿಸಿದೆ. ಚಾಲಕ ಮದ್ಯ ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಬಂದ ಹಿನ್ನೆಲೆ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಸರ್ಕಾರಿ ಬಸ್ ನಿಲ್ದಾಣದ ಬಳಿಯ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಪಾದಾಚಾರಿ ವೃದ್ಧೆಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಟಿಪ್ಪರ್ ಲಾರಿ ಅಡಿ ಬಿದ್ದ ವೃದ್ಧೆ ಚಕ್ರಕ್ಕೆ ಸಿಲುಕಿದ್ದರು. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ವೃದ್ಧೆಯನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.
ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.