ಮೈಸೂರು: ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಜಲಾಶಯ ವರುಣನ ಕೃಪೆಯಿಂದ ಈ ಬಾರಿ ಅವಧಿಗೂ ಮುನ್ನವೇ ಭರ್ತಿಯಾಗಿದೆ. ಕಾವೇರಿ ತಾಯಿಗೆ ನಾಳೆ ಸಿಎಂ ಬಾಗಿನ ಅರ್ಪಿಸಲಿದ್ದಾರೆ.
ಕಳೆದ 20 ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಡ್ಯಾಂ ಈ ಬಾರಿ ಅವಧಿಗೂ ಮುನ್ನವೇ ಭರ್ತಿಯಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಭರ್ತಿಯಾಗುತ್ತಿದ್ದ ಕೆಆರ್‌ಎಸ್, ಈ ಬಾರಿ ಜುಲೈ ಎರಡನೇ ವಾರದಲ್ಲೇ ಭರ್ತಿಯಾಗಿದೆ.
Advertisement
Advertisement
ಕೆಆರ್‍ಎಸ್ ಭರ್ತಿಯಾಗಿರುವ ಹಿನ್ನೆಲೆ ನಾಳೆ ಮಧ್ಯಾಹ್ನ 12.10ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾವೇರಿ ತಾಯಿಗೆ ಬಾಗಿನ ಅರ್ಪಿಸಲಿದ್ದಾರೆ. ನಾಳೆ ಚಾಮುಂಡಿ ಬೆಟ್ಟಕ್ಕೆ ಸಿಎಂ ಭೇಟಿ ನೀಡಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಹೆಚ್‍ಡಿ.ಕೋಟೆಯ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಮಧ್ಯಾಹ್ನ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಬಿಡಲಿದ್ದಾರೆ. ಅಂದಹಾಗೇ ಸಿಎಂ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಒಂದು ವರ್ಷದ ಅವಧಿಯಲ್ಲಿ ಎರೆಡೆರಡು ಬಾರಿ ಬಾಗಿನ ಸಮರ್ಪಣೆ ಭಾಗ್ಯ. ಸಿಎಂ ಆಗಿ ಎರಡನೇ ಬಾರಿ ಕಾವೇರಿ ಹಾಗೂ ಕಪಿಲೆಗೆ ಬಾಗಿನ ಅರ್ಪಿಸಲಿದ್ದಾರೆ. ಇದನ್ನೂ ಓದಿ: ಪಕ್ಷದ ಅಧ್ಯಕ್ಷರು ಇಡಿ ಮುಂದೆ ಹೋಗುವಾಗ ನಾನು ಹುಟ್ಟುಹಬ್ಬ ಆಚರಿಸೋದು ಸರಿಯಲ್ಲ: ಖರ್ಗೆ
Advertisement
Advertisement
ಇತ್ತ ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿದೆ. ಜುಲೈ 12 ರಂದು ಕೆಆರ್‌ಎಸ್ ಡ್ಯಾಂ ಬಳಿ ನದಿಗೆ ಹಾರಿದ್ದ ಬೆಂಗಳೂರು ನಿವಾಸಿ ಅಶೋಕ್ ಮೃತದೇಹ ಶ್ರೀರಂಗಪಟ್ಟಣದ ಮಹದೇವಪುರದ ಪವರ್ ಪ್ಲಾಂಟ್ ಬಳಿ ಪತ್ತೆಯಾಗಿದೆ. ಮತ್ತೊಂದೆಡೆ ನದಿಗೆ ಹಾರಿದ್ದ ಮೈಸೂರು ಮೂಲದ ಸೃಜನ್ ಮೃತದೇಹ ಪಶ್ಚಿಮ ವಾಹಿನಿಯಲ್ಲಿ ಪತ್ತೆಯಾಗಿದೆ. ಮಲೆನಾಡಿನಲ್ಲಿ ಭಾರೀ ಮಳೆ ಹಿನ್ನೆಲೆ ರಾಯಚೂರಿನಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ನಾಲ್ಕು ದಿನಗಳ ಹಿಂದೆ ತುಂಗಭದ್ರಾ ನದಿಯಲ್ಲಿ ನಾಪತ್ತೆಯಾದ ಅರ್ಚಕನ ಪತ್ತೆಗೆ ಶೋಧ ಮುಂದುವರಿದಿದೆ. ಮೂರು ದಿನಗಳಿಂದ ಸತತ ಹುಡುಕಾಟ ನಡೆಸಿದ್ರೂ ಮೃತದೇಹ ಮಾತ್ರ ಪತ್ತೆಯಾಗಿಲ್ಲ.
ರಾಯಚೂರು ಜಿಲ್ಲೆ ದೇವರಗುಡಿ ಗ್ರಾಮದಲ್ಲಿ ಸೇತುವೆ, ರಸ್ತೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇವರಗುಡಿ ಗ್ರಾಮದಿಂದ ಪಗಡದಿನ್ನಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಜೀವ ಪಣಕ್ಕಿಟ್ಟು ಹಳ್ಳವನ್ನ ದಾಟಿಕೊಂಡು ಹೋಗಬೇಕು. ಕೈಯಲ್ಲಿ ಸ್ಕೂಲ್ ಬ್ಯಾಗ್, ಪ್ಯಾಂಟು, ಚಪ್ಪಲಿ ಹಿಡಿದುಕೊಂಡು ಮಕ್ಕಳು ಮಕ್ಕಳು ಹಳ್ಳ ದಾಟಿ ಹೋಗ್ತಾರೆ. ರಸ್ತೆ ಅಥವಾ ಸೇತುವೆ ನಿರ್ಮಾಣಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.