ಬೆಂಗಳೂರು: ಆರು ಮಂದಿ ಜೆಡಿಎಸ್ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.
ಹೌದು. ಹಾಲಿ 6 ಜೆಡಿಎಸ್ ಶಾಸಕರು, ಕಳೆದ ಬಾರಿ ಸೋತ 6 ಅಭ್ಯರ್ಥಿಗಳು ಸೇರಿ ಒಟ್ಟು 12 ಮಂದಿ ಜೆಡಿಎಸ್‍ಗೆ ಗುಡ್‍ಬೈ ಹೇಳಲು ಮುಂದಾಗಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ಆಪರೇಷನ್ ಕಮಲಕ್ಕೆ ಒಳಗಾಗದೇ ಪಕ್ಷದ ಹಿರಿಯ ನಾಯಕರ ವರ್ತನೆಗೆ ಬೇಸತ್ತು ಶಾಸಕರು ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ರಾಜೀನಾಮೆ ನೀಡುವ 12 ಶಾಸಕರ ಪಟ್ಟಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ಕೈ ಸೇರಿದೆ. ರಾಜೀನಾಮೆ ನೀಡುವ ಬಹುತೇಕ ಜೆಡಿಎಸ್ ಶಾಸಕರು ಕಾಂಗ್ರೆಸ್‍ನತ್ತ ಒಲವು ತೋರಿಸಿದ್ದಾರೆ.
ಯಾರು ರಾಜೀನಾಮೆ?
ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಅವರು ಈಗಾಗಲೇ ಜೆಡಿಎಸ್ ನಾಯಕರ ಜೊತೆ ಮುನಿಸಿಕೊಂಡಿದ್ದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಬಿಜೆಪಿ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿರುವ ಜಿಟಿಡಿ ಕಮಲ ಸೇರುವುದು ಬಹುತೇಕ ಖಚಿತವಾಗಿದೆ.
ಪಿರಿಯಾಪಟ್ಟಣದ ಶಾಸಕ ಮಹದೇವ್, ನಾಗಮಂಗಲದ ಸುರೇಶ್ ಗೌಡ ಕಾಂಗ್ರೆಸ್ ಅಥವಾ ಬಿಜೆಪಿ ಪೈಕಿ ಒಂದು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಯಾವುದು ಎನ್ನುವುದು ಇನ್ನು ಅಧಿಕೃತವಾಗಿಲ್ಲ. ಇದನ್ನೂ ಓದಿ: ಎಚ್‍ಡಿಕೆಗೆ ಡಿಕೆಶಿ ಮೇಲೆ ಪ್ರೀತಿ ಇಲ್ಲ, ಫೋನ್ ಕದ್ದಾಲಿಕೆ ನಿಜ – ದಳ ಶಾಸಕ ಶ್ರೀನಿವಾಸ್
ಶ್ರೀರಂಗಪಟ್ಟಣದ ರವೀಂದ್ರ ಶ್ರೀಕಂಠಯ್ಯ, ಗುಬ್ಬಿ ಶಾಸಕ ಶ್ರೀನಿವಾಸ್, ಚಿಕ್ಕನಾಯಕನ ಹಳ್ಳಿಯ ಸುರೇಶ್ ಬಾಬು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಯಿದೆ. ಮಾಗಡಿಯ ಮಂಜುನಾಥ್ ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ.