ಚಾಮರಾಜನಗರ: ಕುರಿ ಮೇಯಿಸುತ್ತಿದ್ದ ವೃದ್ಧ ಕುರಿಗಾಹಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದಲ್ಲಿ ನಡದಿದೆ.
ಮಂಗಲ ಗ್ರಾಮದ ಮಹದೇವೇಗೌಡ(60) ಮೃತ ದುರ್ದೈವಿ. ಮಹದೇವೇಗೌಡ ಮಂಗಳವಾರ ಸಂಜೆ ಕುರಿ ಮೇಯಿಸುವಾಗ ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮಹದೇವೇಗೌಡ ಅವರ ಕತ್ತಿಗೆ ಪಂಚೆ ಬಿಗಿದು, ಸ್ವಲ್ಪ ದೂರದವರೆಗೆ ಎಳೆದು ತಂದು ನಂತರ ಕಲ್ಲಿನಿಂದ ತಲೆ ಜಜ್ಜಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಮಂಗಳವಾರ ಕುರಿ ಮೇಯಿಸಿಕೊಂಡು ಬರಲು ಹೋಗಿದ್ದ ಮಹದೇವೇಗೌಡ ಮನೆಗೆ ವಾಪಸ್ ಬಾರದ ಹಿನ್ನೆಲೆ ಬೆಳಗ್ಗೆ ಮನೆಮಂದಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮಾದಾಪುರದ ಬಳಿ ಕುರಿಗಾಹಿಯ ಮೃತದೇಹ ಪತ್ತೆಯಾಗಿದೆ. ಸಂತೆಮರಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವೃದ್ಧ ಕುರಿಗಾಹಿಯನ್ನು ಹತ್ಯೆ ಮಾಡಿದ್ದಲ್ಲದೇ ದುಷ್ಕರ್ಮಿಗಳು ಕುರಿಯನ್ನು ಕೂಡ ಹೊತ್ತೊಯ್ದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.