ರಾಯಚೂರು: ಜಿಲ್ಲೆಯ ಸಿರವಾರದ ಕವಿತಾಳ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರ ನಿರ್ಲಕ್ಷ್ಯಕ್ಕೆ ವೃದ್ಧರೊಬ್ಬರು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕವಿತಾಳ ಸರ್ಕಾರಿ ಆಸ್ಪತ್ರೆಯಲ್ಲಿ ರಂಗಪ್ಪ(೭೦) ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ. ತಡರಾತ್ರಿ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ರಂಗಪ್ಪ ಅವರನ್ನು ಕುಟುಂಬಸ್ಥರು ಕವಿತಾಳ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕಿದ್ದ ವೈದ್ಯರು ಆಸ್ಪತ್ರೆಯಲ್ಲಿ ಇರಲಿಲ್ಲ. ಈ ಹಿನ್ನೆಲೆ ರಂಗಪ್ಪ ಅವರ ಕುಟುಂಬಸ್ಥರು ವೈದ್ಯರಿಗೆ ಕರೆ ಮಾಡಿ ಆಸ್ಪತ್ರೆಗೆ ಬರುವಂತೆ ಮನವಿ ಮಾಡಿದ್ದರು. ಒಂದು ಗಂಟೆ ಕಾದರು ವೈದ್ಯರು ಆಸ್ಪತ್ರೆಗೆ ಬಾರದೆ ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ರಂಗಪ್ಪ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.
ಇದೇ ಸಂದರ್ಭದಲ್ಲಿ ಇನ್ನೊಬ್ಬರು ವೃದ್ಧರ ಸ್ಥಿತಿ ಕೂಡ ಗಂಭಿರವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆ ಸಿಬ್ಬಂದಿ ಲಿಂಗಸುಗೂರು ತಾಲೂಕಾಸ್ಪತ್ರೆಗೆ ರವಾನಿಸಿದರು. ಹೀಗಾಗಿ ಚಿಕಿತ್ಸೆ ಪಡೆದು ಸದ್ಯ ವೃದ್ಧ ಚೇತರಿಸಿಕೊಳ್ಳುತ್ತಿದ್ದಾರೆ.
ಇತ್ತ ರಂಗಪ್ಪ ಅವರ ಸಾವಿನಿಂದ ಸಿಟ್ಟಿಗೆದ್ದ ಕುಟುಂಬಸ್ಥರು ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರು ಬಂದು ಚಿಕಿತ್ಸೆ ಕೊಟ್ಟಿದ್ದರೆ ರಂಗಪ್ಪ ಅವರು ಮೃತಪಡುತ್ತಿರಲಿಲ್ಲ. ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.