ಬಳ್ಳಾರಿ: ಬಿಸಿಲಿನ ಝಳಕ್ಕೆ ಬಳ್ಳಾರಿಯಲ್ಲಿ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ. ಆದ್ರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ರೆ ಅವರನ್ನು ಬದುಕಿಸಿಕೊಳ್ಳಬಹುದಿತ್ತು.
ಹೂವಿನ ಹಡಗಲಿಯಿಂದ ಹೊಸಪೇಟೆಗೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆ ಬಿಸಿಲಿನಿಂದ ಬಳಲಿ ಅಸ್ವಸ್ಥರಾದರು. ತಕ್ಷಣವೇ ಅವರನ್ನು ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಆದ್ರೆ ವೈದ್ಯರು ಇಲ್ಲದ ಕಾರಣ ಸಕಾಲಕ್ಕೆ ಚಿಕಿತ್ಸೆ ಸಿಗದೆ ಅವರು ಮೃತಪಟ್ಟರು.
ಬಳ್ಳಾರಿಯಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಉಷ್ಣಾಂಶ 40 ಡಿಗ್ರಿಯಿಂದ 43 ಡಿಗ್ರಿಗೆ ಏರಿಕೆಯಾಗಿದೆ. ಹೀಗಾಗಿ ಮಕ್ಕಳು ನಿರ್ಜಲೀಕರಣದಿಂದ ಬಳಲುತ್ತಿದ್ದು ವಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಚಿಕ್ಕ ಮಕ್ಕಳಲ್ಲಿ ನೀರಿನಂಶ ಕಡಿಮೆಯಾಗುತ್ತಿದೆ. ನವಜಾತ ಶಿಶುಗಳನ್ನು ತ್ರೀವ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಮಗುವಿಗೆ ಎದೆಹಾಲು ಹೆಚ್ಚಿಗೆ ನೀಡಬೇಕು ಮತ್ತು ಮಕ್ಕಳ ದೇಹದಲ್ಲಿ ನೀರಿನಾಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಬಾಣಂತಿಯರು ನಿತ್ಯ ಎಳನೀರು ಸೇರಿದಂತೆ ತಂಪು ಪಾನೀಯಗಳನ್ನು ಸೇವಿಸಬೇಕು ಅಂತಾ ವೈದ್ಯರು ಸಲಹೆ ನೀಡುತ್ತಿದ್ದಾರೆ.
ಭಿಕ್ಷುಕ ಸಾವು: ಕಲಬುರಗಿ ನಗರದ ಕೋಟೆಯಲ್ಲಿ ಬಿಸಿಲಿನ ತಾಪ ತಾಳಲಾರದೇ ಭಿಕ್ಷುಕ ಮೃತಪಟ್ಟಿದ್ದಾರೆ. ಸೋಮವಾರ ಸಂಜೆ ಭಿಕ್ಷುಕನ ಶವ ಪತ್ತೆಯಾಗಿದ್ದು ರವಿವಾರ ಮೃತಪಟ್ಟಿರುವ ಶಂಕೆಯಿದೆ. ಮೃತ ಭಿಕ್ಷಕುಕನ ಹೆಸರು ಮತ್ತು ವಿಳಾಸದ ಬಗ್ಗೆ ಪೊಲೀಸರಿಗೆ ಲಭ್ಯವಾಗಿಲ್ಲ. ಸದ್ಯ ವೃದ್ಧ ಸತ್ತಿರುವ ಸ್ಥಿತಿ ನೋಡಿದ್ರೆ ಬಿಸಲಿನ ತಾಪಕ್ಕೆ ಬಲಿಯಾದಂತಿದೆ. ಸ್ಥಳಕ್ಕೆ ಚೌಕ್ ಪೊಲೀಸರು ಭೇಟಿ ನೀಡಿ ಶವದ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.