ಬೆಂಗಳೂರು: ಓಲಾ(OLA), ಉಬರ್ (Uber), ರ್‍ಯಾಪಿಡೋ (Rapido) ಆಪ್ ಆಧಾರಿತ ಆಟೋಗಳ ಸುಲಿಗೆಗೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಆಟೋಗಳನ್ನ ಸೀಜ್ ಮಾಡಲು ಹೊರಟಿದ್ದ ಸಾರಿಗೆ ಇಲಾಖೆಯ ವಿರುದ್ಧ ದೊಡ್ಡ ಪ್ರತಿಭಟನೆಯೇ ನಡೆದಿದೆ.
ಹೌದು. ಓಲಾ, ಉಬರ್, ರ್‍ಯಾಪಿಡೋ ಆಪ್ ಆಧಾರಿತ ಆಟೋಗಳಿಂದ ಹಾಡಹಗಲೇ ಜನರಿಂದ ಸುಲಿಗೆ ನಡೀತಾ ಇದೆ. ಸಾರಿಗೆ ಇಲಾಖೆ ಖಡಕ್ ಎಚ್ಚರಿಕೆ ಕೊಟ್ಟಿದ್ರೂ ನಿಂತಿಲ್ಲ ಇವರುಗಳ ಸುಲಿಗೆ. `ಆಟೋ’ಟೋಪದ ಬಗ್ಗೆ ಪಬ್ಲಿಕ್ ಟಿವಿ ವರದಿಗಾರರು ವಾಸ್ತವ ಚಿತ್ರಣವನ್ನ ತೆರೆದಿಟ್ಟಿದ್ದಾರೆ.
ಓಲಾ, ಉಬರ್, ರ್‍ಯಾಪಿಡೋ ಕಂಪನಿಗಳಿಗೆ ಈಗಾಗಲೇ ನೋಟಿಸ್ ನೀಡಿ ಕೊಟ್ಟ ಗಡುವು ಕೂಡ ಮುಗಿದಿದೆ. ಆದರೆ ಓಲಾ, ಉಬರ್ ಕಂಪನಿಗಳು ಹೆಚ್ಚುವರಿ ಹಣ ವಸೂಲಿ ಮಾಡ್ತಿಲ್ಲ ಅಂತ ವಾದ ಮಾಡ್ತಿದೆ. ನಾಳೆ ಸಂಜೆ ಓಲಾ, ಉಬರ್ ಆಟೋಗಳ ಭವಿಷ್ಯ ನಿರ್ಧಾರವಾಗಲಿದ್ದು, ಸಭೆ ಬಳಿಕ ಸಾರಿಗೆ ಇಲಾಖೆ (Transport Department) ಅಂತಿಮ ನಿರ್ಣಯ ಗೊತ್ತಾಗಲಿದೆ. ಇದನ್ನೂ ಓದಿ: ಬಿಜೆಪಿ ಸುಳ್ಳಿನ ಫ್ಯಾಕ್ಟರಿ, ಮೋದಿ ಒಳ್ಳೆಯ ನಾಟಕವಾಡುತ್ತಾರೆ: ಸಿದ್ದರಾಮಯ್ಯ
ಆಪ್ ಆಧಾರಿತ ಆಟೋ (Auto)ಗಳ ವಿರುದ್ಧ ಸಾರಿಗೆ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಓಲಾ, ಉಬರ್, ರ್‍ಯಾಪಿಡೋ ಆಪ್ ಮೂಲಕ ಆಟೋ ಓಡಿಸಿದ್ರೆ ಜಪ್ತಿ ಮಾಡೋದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಈ ಬೆನ್ನಲ್ಲೇ ಜಯನಗರ ಆರ್‌ಟಿಓ ಅಧಿಕಾರಿಗಳು ಆಪ್ ಆಧಾರಿತ ಆಟೋ ಚಾಲಕನಿಗೆ ಗೆ 6 ಸಾವಿರ ರೂ. ದಂಡದ ರಶೀದಿಯನ್ನ ಕೊಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಆಟೋ ಚಾಲಕರು ಜಯನಗರ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ರು.
ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಆಟೋಗಳನ್ನ ಸೀಜ್ ಮಾಡುವ ಸಾರಿಗೆ ಇಲಾಖೆಯ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿವೆ. ಆಟೋಗಳನ್ನ ಸೀಜ್ ಮಾಡಿದ್ರೆ, ಸಿಎಂ, ಸಾರಿಗೆ ಸಚಿವರ ಮನೆಗಳಿಗೆ ಮುತ್ತಿಗೆ ಹಾಕ್ತೇವೆ ಅಂತ ಆಪ್ ಆಧಾರಿತ ಆಟೋ ಚಾಲಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.