ತುಮಕೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಅವರ ಬಗ್ಗೆ ಮೀಸಲಾತಿ ಹೋರಾಟದಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವಹೇಳನಕಾರಿ ಹೇಳಿಕೆಗೆ ಒಕ್ಕಲಿಗ ಮುಖಂಡರು ಸಿಡಿದೆದ್ದಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ ಒಕ್ಕಲಿಗ ಮುಖಂಡರು, ವಾಲ್ಮೀಕಿ ಸ್ವಾಮೀಜಿಗಳು ಸಿಎಂ ಹಾಗೂ ದೇವೇಗೌಡರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ವಾರದೊಳಗೆ ಕ್ಷಮೆಯಾಚಿಸದಿದ್ದರೆ ರಾಜ್ಯಾದ್ಯಂತ ಹೋರಾಟದ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ವಾಮೀಜಿ ಅವರು ಹದ್ದು ಮೀರಿ ಮಾತನಾಡಿದ್ದು, ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು. ನಮ್ಮ ಸಮಾಜವನ್ನ ಅವಮಾನಿಸಲಾಗಿದೆ. ಹಕ್ಕುಗಳನ್ನು ಸರ್ಕಾರದಲ್ಲಿ ಕೇಳಬೇಕು. ಕುಮಾರಸ್ಚಾಮಿನೂ ಹೇಳಬೇಕು ಅವರಪ್ಪನೂ ಕೇಳಬೇಕು ಅನ್ನೋ ಪದ ಬಳಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿ ಹೇಳಿದ್ದೇನು?
ಮೀಸಲಾತಿಗೆ ಆಗ್ರಹಿಸಿ ವಾಲ್ಮೀಕಿ ಸಮುದಾಯದ ಹೋರಾಟದಲ್ಲಿ ಭಾಗವಹಿಸಿದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು, 17 ಮಂದಿ ವಾಲ್ಮೀಕಿ ಸಮುದಾಯದ ಶಾಸಕರು ಇದ್ದಾರೆ. ಇವರು ರಾಜೀನಾಮೆ ನೀಡಿದರೆ ಸರ್ಕಾರ ಉರುಳುತ್ತದೆ. ಸಿಎಂ ಸರ್ಕಾರ ಉಳಿಸಲು ಕಾಲು ಹಿಡಿಯುತ್ತಾರೆ ಅನ್ನೋದು ನಂಗೆ ಗೊತ್ತಿದೆ. ಅವರು ಸಿಎಂ ಆಗಿ ಮುಂದುವರೆಯಬೇಕೇ ಅಥವಾ ಬೇಡವಾ ಎಂದು ಇವತ್ತು ನಿರ್ಧಾರವಾಗಲಿ. ನಾವು ಹೇಳಿದರೆ ಮುಖ್ಯಮಂತ್ರಿಯೂ ಕೇಳಬೇಕು ಅವರಪ್ಪನೂ ಕೇಳಬೇಕು ಎಂದು ಎಂದು ವಾಗ್ದಾಳಿ ನಡೆಸಿದ್ದರು.
ನಮ್ಮ ವಾಲ್ಮೀಕಿ ಸಮುದಾಯದ ಶಾಸಕರು ಪಕ್ಷಾತೀತವಾಗಿ ರಾಜೀನಾಮೆ ಕೊಟ್ಟರೆ ಮುಖ್ಯಮಂತ್ರಿ ಗೊಟಕ್ ಅಂದುಬಿಡ್ತಾರೆ ಎಂದು ಹೇಳಿಕೆಯನ್ನು ನೀಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ವಿಚಾರವಾಗಿ ಮಾತನಾಡಲು ಬಂದಿದ್ದ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಮುಂದೆಯೇ ಮುಖ್ಯಮಂತ್ರಿಗಳಿಗೆ ಅವಾಜ್ ಹಾಕಿದ ಸ್ವಾಮೀಜಿ, ನಮ್ಮವರು ರಾಜೀನಾಮೆ ಕೊಟ್ಟರೆ ಸರ್ಕಾರ ಉಳಿಯಲ್ಲ ಎಂದು ಎಚ್ಚರಿಕೆ ನೀಡಿದ್ದರು.