-ಸುಖ್ ಪಾಲ್ ಪೊಳಲಿ
ಮಂಗಳೂರು: ತಮಿಳುನಾಡು ಮತ್ತು ಕೇರಳದಲ್ಲಿ ಅಬ್ಬರಿಸಿದ ಓಖಿ ಚಂಡಮಾರುತ ರಾಜ್ಯದ ಕರಾವಳಿಗೂ ಅಪ್ಪಳಿಸಿದೆ. ಮಂಗಳೂರಿನ ಸಮುದ್ರದಲ್ಲಿ ರಕ್ಕಸ ಅಲೆಗಳು ಏಳುತ್ತಿದ್ದು ಶನಿವಾರ ರಾತ್ರಿಯಿಂದ ಉಗ್ರ ಸ್ವರೂಪ ಪಡೆದಿದೆ. ಕಡಲ ತೀರದ 15 ಕ್ಕೂ ಹೆಚ್ಚು ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಇಡೀ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಸಮುದ್ರದಿಂದ ರಸ್ತೆಗೆ ಬಂತು ನೀರು: ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಕಡಲಿನ ಅಬ್ಬರ ಜೋರಾಗಿದ್ದು, ತೀರ ಪ್ರದೇಶಕ್ಕೆ ರಕ್ಕಸ ಅಲೆಗಳು ಅಪ್ಪಳಿಸತೊಡಗಿವೆ.
Advertisement
Advertisement
ಶನಿವಾರ ಬೆಳಗ್ಗೆ ಕರಾವಳಿ ಭಾಗದಲ್ಲಿ ಮೋಡದ ವಾತಾವರಣ ಇದ್ದರೂ, ಹನಿ ಮಳೆಯೂ ಬಿದ್ದಿರಲಿಲ್ಲ. ಹೀಗಿದ್ದರೂ ಬಿರುಗಾಳಿ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮುನ್ಸೂಚನೆ ನೀಡಿದ್ದರಿಂದ ಮೀನುಗಾರರು ಸೇರಿದಂತೆ ಬೀಚ್ ಪ್ರದೇಶದಲ್ಲಿ ಪ್ರವಾಸಿಗರಿಗೆ ನೀರಿಗಿಳಿಯದಂತೆ ಎಚ್ಚರಿಕೆ ನೀಡಲಾಗಿತ್ತು. ಇನ್ನು ಮಂಗಳೂರಿನ ಉಳ್ಳಾಲ ಭಾಗದಲ್ಲಿ 25ಕ್ಕೂ ಹೆಚ್ಚು ನಾಡದೋಣಿಗಳನ್ನು ತೀರಕ್ಕೆಳೆದು ಕಟ್ಟಿದ್ದಲ್ಲದೆ, ಮೀನುಗಾರರು ಕಡಲಿನ ವೈಪರೀತ್ಯ ಕಂಡು ದಿಗಿಲುಗೊಂಡಿದ್ದರು. ಸಂಜೆಯಾಗುತ್ತಲೇ ಕಡಲಿನಲ್ಲಿ ರಕ್ಕಸ ಅಲೆಗಳು ಏಳಲಾರಂಭಿಸಿದ್ದು ಕಡಲ ತೀರದ ಜನರು ಆತಂಕಗೊಂಡಿದ್ದಾರೆ. ಸೋಮೇಶ್ವರದ ಪರಿಬೈಲ್, ಬಟ್ಟಪ್ಪಾಡಿಯಲ್ಲಿ ಸಮುದ್ರದ ನೀರು ರಸ್ತೆಗೆ ಬಂದಿದೆ. ಉಳ್ಳಾಲ, ಸೋಮೇಶ್ವರ, ಮುಕ್ಕ, ಪಣಂಬೂರು ಸಮುದ್ರ ತೀರದಲ್ಲಿ ಸಮುದ್ರದ ಅಲೆಗಳ ರಭಸ ತೀವ್ರ ವಾಗಿದ್ದು ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಕಡಲ ತೀರದಲ್ಲಿ ಹೈ ಅಲರ್ಟ್ ಘೋಷಿಸಿದೆ. ಡಿಸೆಂಬರ್ 6ರ ತನಕ ಲಕ್ಷ ದ್ವೀಪಕ್ಕೆ ಎಲ್ಲಾ ವೆಸಲ್ ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
Advertisement
ಇದನ್ನೂ ಓದಿ: ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ
Advertisement
ಮಂಗಳೂರಿಂದ ಹೊರಟವ್ರು ಬದುಕಿ ಬಂದ್ರು: ಲಕ್ಷದ್ವೀಪದ ಬಳಿ ನಾಪತ್ತೆಯಾಗಿದ್ದ ಮಂಗಳೂರಿನ ಬೋಟ್ ನಲ್ಲಿದ್ದ 8 ಸಿಬ್ಬಂದಿಯನ್ನು ಕೊನೆಗೂ ನೌಕಾಪಡೆ ರಕ್ಷಣೆ ಮಾಡಿದೆ. ಮಂಗಳೂರಿನ ಹಳೆಬಂದರಿನಿಂದ ನವೆಂಬರ್ 28ರಂದು ಸರಕು ತುಂಬಿಕೊಂಡು ಹೊರಟಿದ್ದ ಜೇವರ್ಗಿ 258 ಹೆಸರಿನ ಬೋಟ್ ನಿನ್ನೆ ರಾತ್ರಿ ಚಂಡಮಾರುತಕ್ಕೆ ಸಿಲುಕಿ ನಾಪತ್ತೆಯಾಗಿತ್ತು. ಕರಾವಳಿ ತಟ ರಕ್ಷಣಾ ಪಡೆ ಮತ್ತು ನೌಕಾಪಡೆ ಕಾರ್ಯಾಚರಣೆ ಯತ್ನ ನಡೆಸಿತ್ತಾದರೂ ಬಿರುಗಾಳಿಯಿಂದಾಗಿ ಬೋಟ್ ಸಮುದ್ರದಲ್ಲಿ ಕಾಣೆಯಾಗಿತ್ತು. ಶನಿವಾರ ಸಂಜೆ ಹೆಲಿಕಾಪ್ಟರ್ ಮೂಲಕ ಪತ್ತೆ ಕಾರ್ಯ ನಡೆಸಿದ ನೌಕಾಪಡೆ ಬೋಟಿನಲ್ಲಿದ್ದ 8 ಮಂದಿ ತಮಿಳ್ನಾಡು ಮೂಲದ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.
ಕೇರಳ, ತಮಿಳುನಾಡಿನಲ್ಲಿ ಭೀತಿ ಮೂಡಿಸಿದ್ದ ಓಖಿ ಚಂಡಮಾರುತ ಕರಾವಳಿಯಲ್ಲೂ ಪ್ರತಾಪ ತೋರಿಸಿದೆ. ಚಂಡ ಮಾರುತದ ಪ್ರಭಾವ ಮುಂದಿನ ಮೂರು ದಿನಗಳ ಕಾಲ ಇರುವ ಸಾಧ್ಯತೆಗಳಿದ್ದು ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
https://www.youtube.com/watch?v=IskPbU9PesM
https://www.youtube.com/watch?v=XHBE1SXcP-A
https://www.youtube.com/watch?v=ampmtdoQElk