Connect with us

Districts

ಓಖಿಗೆ ಕಡಲ ಒಡಲು ನಲುಗಿತು-ಸಮುದ್ರದ ನೀರು ರಸ್ತೆಗೆ ಬಂತು!

Published

on

ಉಡುಪಿ: ಕಡಲ ಒಡಲು ಓಖಿಗೆ ಸಿಲುಕಿ ಪ್ರಕ್ಷುಬ್ಧ ಆಗಿರುವುದರಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‍ಗಳು ಮತ್ತೆ ವಾಪಸ್ ಬಂದು ಬಂದರಿನಲ್ಲಿ ಲಂಗರು ಹಾಕುತ್ತಿದೆ. ಉಡುಪಿಯ ಮಲ್ಪೆ ಬೀಚ್‍ನಲ್ಲಿ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಹೋಗುವ ಪ್ರವಾಸಿ ಬೋಟ್ ಸಂಚಾರ ನಿಷೇಧಿಸಲಾಗಿದೆ. ಕಳೆದ ರಾತ್ರಿಯಿಂದ ರಸ್ತೆಗೆ ಕಡಲ ಅಲೆಗಳು ಅಪ್ಪಳಿಸುತ್ತಿದ್ದು ತೀರದ ಜನ ಆತಂಕಕ್ಕೀಡಾಗಿದ್ದಾರೆ.

ಓಖಿ ಚಂಡಮಾರುತದಿಂದ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಓಖೀ ಚಂಡಮಾರುತ ರಾಜ್ಯದ ಕರಾವಳಿಯಲ್ಲಿ ಹಾದು ಹೋಗುತ್ತಿರುವುದರಿಂದ ರಾಜ್ಯ ಕರಾವಳಿಯಲ್ಲಿಯೂ ಬದಲಾವಣೆಯಾಗಿದೆ. ಅಲೆಗಳ ಅಬ್ಬರ ಹೆಚ್ಚಾಗಿದ್ದು ಇನ್ನೆರಡು ದಿನಗಳ ಕಾಲ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಕಳೆದ ರಾತ್ರಿ ಕಾಪು- ಪಡುಕೆರೆಯಲ್ಲಿ ಸಮುದ್ರದ ನೀರು ರಸ್ತೆಗೆ ಅಪ್ಪಳಿಸಿದೆ. ರಾತ್ರೋ ರಾತ್ರಿ ದೋಣಿಗಳನ್ನು ತೀರದಿಂದ ತಟಕ್ಕೆ ಎಳೆದು ಹಾಕಲಾಗುತ್ತಿದೆ. ಮೀನುಗಾರಿಕೆಗೆ ತೆರಳಿದ್ದ ಯಾಂತ್ರೀಕೃತ ಮೀನುಗಾರಿಕ ಬೋಟ್‍ಗಳು ಮತ್ತೆ ಬಂದರು ಸೇರುತ್ತಿದೆ. ಕೇರಳ, ತಮಿಳುನಾಡಿನ ಬೋಟ್‍ಗಳು, ಮೀನುಗಾರರು ಆಶ್ರಯಕ್ಕಾಗಿ ಉಡುಪಿಯ ಮಲ್ಪೆ ಬಂದರಿನತ್ತ ಧಾವಿಸಿ ಬರುತ್ತಿದ್ದಾರೆ. ಮಲ್ಪೆ ಬೀಚ್‍ನಲ್ಲಿಯೂ ಪ್ರವಾಸಿಗರು ಸಮುದ್ರದಲ್ಲಿ ಬಹುದೂರ ಹೋಗಿ ನೀರಿನಲ್ಲಿ ನೀರಾಟ ಆಡದಂತೆ ಎಚ್ಚರಿಕೆ ನೀಡಲಾಗುತ್ತಿದೆ.

ಜಾಗ್ರತೆ, ಜೀವದ ಜೊತೆ ಚೆಲ್ಲಾಟ ಬೇಡ: ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಲ್ಪೆಯ ಲೈಫ್ ಗಾರ್ಡ್ ಮೋಹನ್, ಹೊರ ಜಿಲ್ಲೆಯ ಪ್ರವಾಸಿಗರನ್ನು ನಿಯಂತ್ರಿಸೋದೇ ಸವಾಲು. ಹೇಳಿದರೂ ಸಮುದ್ರಕ್ಕೆ ಇಳಿದು ಬಿಡುತ್ತಾರೆ. ಅಪಾಯ ಎಂದು ಬೋರ್ಡ್ ಹಾಕಿದ್ರೂ ಅದನ್ನು ಜನ ಗಣನೆಗೆ ತೆಗೆದುಕೊಳ್ಳಲ್ಲ ಅಂತ ಅಸಮಾಧಾನಗೊಂಡರು.

ಸಮುದ್ರದಲ್ಲಿ ಭಾರಿ ಪ್ರಮಾಣದ ಅಲೆಗಳು ಏಳುತ್ತಿರುವುದರಿಂದ ಕಸಗಳು ದಡ ಸೇರುತ್ತಿದೆ. ಮಲ್ಪೆಯ ಸೈಂಟ್ ಮೇರಿಸ್ ಐಲ್ಯಾಂಡ್‍ಗೆ ತೆರಳುವ ಪ್ರವಾಸಿ ಬೋಟ್‍ಗಳ ಸಂಚಾರ ನಿಷೇಧಿಸಲಾಗಿದೆ. ಇಂದು ಪ್ರವಾಸಿಗರಿಗೆ ಐಲ್ಯಾಂಡ್ ನೋಡುವ ಭಾಗ್ಯ ಸಿಗುವುದಿಲ್ಲ. ನಾಳೆ ಮಧ್ಯ ರಾತ್ರಿವರೆಗೂ ಹವಾಮಾನ ಏರುಪೇರಾಗುವ ಸಾಧ್ಯತೆಯಿದೆ ಎಂದು ಈಗಾಗಲೇ ಹವಮಾನ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಕೋಸ್ಟ್ ಗಾರ್ಡ್ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವುದಕ್ಕೆ ಸೂಚಿಸಲಾಗಿದೆ. ಬೀಚ್‍ನಲ್ಲಿರುವ ಲೈಫ್ ಗಾರ್ಡ್‍ಗಳು ಪ್ರವಾಸಿಗರ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸಿದ್ದಾರೆ. ಮೈಕ್ ಮೂಲಕ ಓಖಿ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ.

ಓಖಿ ಚಂಡಮಾರುತ ರಾಜ್ಯ ಕರಾವಳಿಯಿಂದ ಬಹುದೂರದಲ್ಲಿ ಸಾಗುತ್ತಿದ್ದು, ಲಕ್ಷದ್ವೀಪದಿಂದ ಗುಜರಾತ್ ಕಡೆಗೆ ಪಯಣಿಸಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮ್ಯಾಪ್ ಸಿದ್ಧಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹರಿಯಬಿಟ್ಟು ಗೊಂದಲ ನಿವಾರಣೆಗೆ ಯತ್ನಿಸುತ್ತಿದೆ. ಒಟ್ಟಿನಲ್ಲಿ ಓಖಿ ಚಂಡಮಾರುತದಿಂದ ಸಮುದ್ರ ತೀರದ ಜನರು ಆತಂಕಗೊಂಡಿದ್ದಾರೆ. ಎರಡು ದಿನಗಳಲ್ಲಿ ಕಡಲು ಸಮಸ್ಥಿತಿಗೆ ಬರಬಹುದು ಎಂಬ ಆಶಾಭಾವನೆಯಲ್ಲಿದ್ದಾರೆ.

 

ಇದನ್ನೂ ಓದಿ: ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

https://www.youtube.com/watch?v=QC37Q2pdg9w

Click to comment

Leave a Reply

Your email address will not be published. Required fields are marked *