ಬೆಂಗಳೂರು: ಕೆರೆಯ ಜಾಗದಲ್ಲಿ ದೇವಸ್ಥಾನ ಕಟ್ಟಲಾಗಿದೆ ಎಂಬ ಕಾರಣಕ್ಕೆ ಪೊಲೀಸರ ಸಮಕ್ಷಮದಲ್ಲಿ ಕೆಲವೇ ದಿನಗಳ ಹಿಂದೆ ಕೊಡಿಗೆಹಳ್ಳಿಯ ಗಣೇಶನಗರದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಗಣೇಶನ ಮೂರ್ತಿಯನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ತೆರವುಗೊಳಿಸಿದ್ದಾರೆ.
ಈ ವೇಳೆ ಸ್ಥಳೀಯರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದವೂ ನಡೆಯಿತು. ಆದರೆ ಸ್ಥಳೀಯರ ಹೇಳಿಕೆಗೆ ಯಾವುದೇ ಬೆಲೆ ನೀಡದ ಅಧಿಕಾರಿಗಳು ಪ್ರತಿಷ್ಠಾಪನೆಯಾಗಿದ್ದ ದೇವರ ವಿಗ್ರಹವನ್ನು ತೆರವು ಮಾಡಿದ್ದಾರೆ.
Advertisement
Advertisement
ಕೊಡಿಗೆಹಳ್ಳಿ ಕೆರೆಗೆ ಸಮೀಪದ ಈ ಜಾಗದಲ್ಲಿ ಶ್ರೀನಿವಾಸ ಮತ್ತು ಸ್ಥಳೀಯರು ಸೇರಿ ಕಳೆದ ಮಂಗಳವಾರ ಗಣೇಶ ದೇವರನ್ನು ಪ್ರತಿಷ್ಠಾಪನೆ ಮಾಡಿದ್ದರು. ಅದ್ಧೂರಿಯಿಂದ ಪೂಜೆ, ಹೋಮ ಹವನಗಳನ್ನು ನೆರವೇರಿಸಿ ದೇವರ ಪ್ರತಿಷ್ಠಾಪನೆ ಮಾಡಿದ್ದರು. ಇದೆಲ್ಲ ನಡೆದು ಮೂರೇ ದಿನಕ್ಕೆ ಗಣೇಶ ವಿಗ್ರಹ ಮೂರ್ತಿಯ ತೆರವು ಮಾಡಲಾಗಿದೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಥಳೀಯರು ಈ ಸ್ಥಳ ಶ್ರೀನಿವಾಸ್ ಎಂಬವರಿಗೆ ಸೇರಿದ್ದು, ಅದರಿಂದಲೇ ಇಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದಾಗಿ ತಿಳಿಸಿದ್ದಾರೆ. ಆದರೆ ಶ್ರೀನಿವಾಸ ಎಂಬುವವರು ತಮ್ಮ ಜಾಗವನ್ನು ಬಿಬಿಎಂಪಿಗೆ ದಾನಮಾಡಿದ್ದರು ಎನ್ನಲಾಗಿದ್ದು, ಈ ಸ್ಥಳದಲ್ಲಿ ಬಿಬಿಎಂಪಿ ಪಾರ್ಕ್ ನಿರ್ಮಿಸಲು ಉದ್ದೇಶಿಸಿತ್ತು. ಆದರೆ ಪಾರ್ಕ್ ನಿರ್ಮಿಸುವ ಮೊದಲು ದೇವಾಲಯ ನಿರ್ಮಿಸಲು ಹೊರಟ್ಟಿದ್ದರು ಎನ್ನಲಾಗಿದೆ.