ಕಲಬುರಗಿ: ಸದ್ಯ ರಾಜ್ಯದಲ್ಲಿ ಉತ್ತಮ ಮಳೆ ಹಿನ್ನೆಲೆ ಬಿತ್ತನೆ ಕಾರ್ಯ ಸಹ ಜೋರಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕಲಬುರಗಿ (Kalaburagi) ಜಿಲ್ಲೆಯ ರೈತರಿಂದ ದುಪ್ಪಟ್ಟು ಹಣ ಪಡೆದು ಗೊಬ್ಬರ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಅಂಗಡಿ ಮಾಲೀಕನಿಗೆ ನೋಟಿಸ್ ನೀಡಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆ ಹಿನ್ನೆಲೆ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಅದನ್ನೇ ಬಂಡವಾಳ ಮಾಡಿಕೊಂಡು ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ರೇವಣಸಿದ್ದೇಶ್ವರ ಅಗ್ರೋ ಏಜೆನ್ಸಿಯ ಗೊಬ್ಬರದ ಅಂಗಡಿ ಮಾಲೀಕ, ಗೊಬ್ಬರ ಹಾಗೂ ಇತರೆ ವಸ್ತುಗಳನ್ನು ಎಂಆರ್‌ಪಿ ದರಕ್ಕಿಂತ ಎರಡು ಪಟ್ಟು ಜಾಸ್ತಿ ಬೆಲೆಗೆ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಅಥಾರಿಟಿ ಹೆಸರು ಬದಲಾವಣೆ?
ಅಲ್ಲದೆ ರೈತರು ಗೊಬ್ಬರದ ಬಿಲ್ ಕೇಳಿದ್ರೆ ನಕಲಿ ಬಿಲ್ ನೀಡುತ್ತಿದ್ದಾರೆ. ಸದ್ಯ ರೈತ ಹಾಗೂ ಅಂಗಡಿ ಮಾಲೀಕರ ವೀಡಿಯೋ ವೈರಲ್ ಆಗುತ್ತಿದ್ದಂತೆ ಕೃಷಿ ಇಲಾಖೆ ಅಧಿಕಾರಿಗಳು ಅಂಗಡಿ ಮೇಲೆ ದಾಳಿ ನಡೆಸಿ ಅಂಗಡಿ ಮಾಲೀಕನಿಗೆ ನೋಟಿಸ್ ನೀಡಿದ್ದಾರೆ.
ಒಂದೆಡೆ ಅಫಜಲಪುರದಲ್ಲಿ ಗೊಬ್ಬರ, ಯೂರಿಯಾ ಹಾಗೂ ಕ್ರಿಮಿನಾಶಕ ಔಷಧಿ ದುಪ್ಪಟ್ಟು ಬೆಲೆಗೆ ಮಾರಾಟವಾದ್ರೆ, ಇತ್ತ ಜೇವರ್ಗಿ ಹಾಗು ಯಡ್ರಾಮಿ ತಾಲೂಕಿನ ಕೆಲ ಗೊಬ್ಬರದ ಅಂಗಡಿ ಮಾಲೀಕರು 2 ವರ್ಷದ ಹಿಂದಿನ ಅವಧಿ ಮುಗಿದ ಕ್ರಿಮಿನಾಶಕಗಳನ್ನು ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಈ ರೀತಿಯಾಗಿ ರೈತರಿಗೆ ವಂಚಿಸುತ್ತಿರುವ ಫರ್ಟಿಲೈಸರ್ ಅಂಗಡಿಗಳ ಪರಿಶೀಲನೆ ನಡೆಸಿ, ಅಧಿಕಾರಿಗಳು ಅವಧಿ ಮುಗಿದ ಕ್ರಿಮಿನಾಶಕಗಳನ್ನು ವಶಕ್ಕೆ ಪಡೆದು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಸಿರು ಸೇನೆ ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.