ನೆಲಮಂಗಲ: ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಕುಟುಂಬಕ್ಕೆ ಪರಿಹಾರದ ಭರವಸೆ ನೀಡಿದ್ದ ಅಧಿಕಾರಿಗಳು ಈಗ ಕುಂಟು ನೆಪ ಹೇಳಿ ಕಚೇರಿಯಿಂದ ಮನೆಗೆ, ಮನೆಯಿಂದ ಕಚೇರಿಗೆ ಅಲೆದಾಡಿಸುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ.
ನೆಲಮಂಗಲ ತಾಲೂಕಿನ ಅರಳೇದಿಬ್ಬದ ನಿವಾಸಿ ಹನುಮಯ್ಯ ಎಂಬುವವರು ಸಹಕಾರಿ ಬ್ಯಾಂಕ್‍ನಲ್ಲಿ ಕೃಷಿಗಾಗಿ 25 ಸಾವಿರ ರೂಪಾಯಿ ಸಾಲ ಮಾಡಿದ್ದರು. ತೀವ್ರ ಬರಗಾಲವಿದ್ದ ಹಿನ್ನೆಲೆಯಲ್ಲಿ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದ ಹನುಮಯ್ಯ 2016ರ ಮೇ 29ನೇ ತಾರೀಕಿನಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಗಂಡನ ಆತ್ಮಹತ್ಯೆ ವಿಚಾರ ತಿಳಿದ ರೈತನ ಹೆಂಡತಿ ತಿಮ್ಮವ್ವ ಹೃದಯಾಘಾತದಿಂದ ಮೃತಪಟ್ಟಿದ್ದರು.
Advertisement
Advertisement
ನೆಲಮಂಗಲ ಸರ್ಕಾರಿ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ವಿಷ ಸೇವಿಸಿರುವುದಾಗಿ ದೃಢಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತನ ಕುಟುಂಬದವರು ಕೃಷಿ ಇಲಾಖೆಯಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ನೆಲಮಂಗಲದ ಕೃಷಿ ಇಲಾಖೆಯ ಅಧಿಕಾರಿಗಳು ರೈತ ವಿಷ ಸೇವನೆಯಿಂದ ಮೃತಪಟ್ಟಿಲ್ಲ ಅವರಿಗೆ 75 ವರ್ಷ ವಯಸ್ಸಾಗಿ ಮೃತ ಪಟ್ಟಿದ್ದಾರೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
Advertisement
Advertisement
ಸರ್ಕಾರ ಮೃತ ರೈತರಿಗೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಡ ರೈತನ ಕುಟುಂಬಗಳಿಗೆ ಪರಿಹಾರ ಸಿಗದೆ ಪರದಾಡುತ್ತಿದ್ದಾರೆ. ಒಟ್ಟಿನಲ್ಲಿ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎನ್ನುವಂತಾಗಿದೆ ಈ ರೈತನ ಕುಟುಂಬಸ್ಥರ ಪರಿಸ್ಥಿತಿ.