ಹುಬ್ಬಳ್ಳಿ: ಒಂದೆಡೆ ನೆರೆ ಪರಿಹಾರ ಸರಿಯಾಗಿ ಸಿಗತ್ತಿಲ್ಲ ಎಂದು ಸಂತ್ರಸ್ತರು ಪರದಾಡುತ್ತಿದ್ದರೆ, ಇತ್ತ ಅಧಿಕಾರಿಗಳು ಪರಿಹಾರಕ್ಕಾಗಿ ದಾಖಲೆ ನೀಡಲು ಬರುವ ರೈತರ ಬಳಿ ಹಣ ವಸೂಲಿಗೆ ಇಳಿದಿದ್ದಾರೆ.
ಹೌದು. ಸಂತ್ರಸ್ತರಿಗೆ ಪರಿಹಾರ ಕೊಡಲು ಗ್ರಾಮ ಲೆಕ್ಕಾಧಿಕಾರಿಯೊಬ್ಬರು ರೈತರ ಬಳಿ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಕುಂದಗೋಳದಲ್ಲಿ ಬಯಲಿಗೆ ಬಂದಿದೆ. ಪರಿಹಾರಕ್ಕಾಗಿ ದಾಖಲೆಗಳ ಸಲ್ಲಿಕೆ ಮಾಡಲು ರೈತರು ಬಂದಾಗ ಅವರ ಬಳಿ ಗ್ರಾಮ ಲೆಕ್ಕಾಧಿಕಾರಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಹಣಿ ಪತ್ರ ಪಡೆಯುವುದರ ಜೊತೆಗೆ ಲಂಚ ಪಡೆಯುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
Advertisement
Advertisement
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಸಹಾಯಕ ಸುಬ್ಬಣ್ಣ ಪ್ರತಿಯೋರ್ವ ರೈತರಿಂದ 20 ರೂ. ಲಂಚ ಪಡೆಯುವ ವಿಡಿಯೋ ಇದೀಗ ವೈರಲ್ ಆಗಿದೆ. ಬೆಳೆ ಪರಿಹಾರ ಪಡೆಯಲು ಪ್ರತಿ ವರ್ಷ ಲಂಚ ಕೊಡುತ್ತಿರಲ್ಲ, ಹಾಗೆಯೇ ಈ ಬಾರಿಯೂ ಲಂಚ ಕೊಡಲೇಬೇಕೆಂದು ಗ್ರಾಮ ಲೆಕ್ಕಾಧಿಕಾರಿ ರೈತರ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ. ಅಲ್ಲದೇ ಹಣ ಕೊಡದಿದ್ದರೆ ನಾನು ದಾಖಲೆಗಳನ್ನ ಮೇಲಾಧಿಕಾರಿಗಳಿಗೆ ಕಳುಹಿಸುವುದಿಲ್ಲ ಎಂದು ಬೆದರಿಕೆ ಹಾಕಿ ರೈತರಿಂದ ಹಣ ಪೀಕುತ್ತಿದ್ದಾರೆ.
Advertisement
ಮೊದಲೇ ಭೀಕರ ಪ್ರವಾಹಕ್ಕೆ ರೈತರು ಬೆಳೆ ಹಾನಿಯಾಗಿದೆ ಎಂದು ಕಂಗಾಲಾಗಿದ್ದಾರೆ. ಈ ನಡುವೆ ನೆರೆ ಪರಿಹಾರ ನೀಡಲು ಅಧಿಕಾರಿಗಳು ಲಂಚ ಕೇಳುತ್ತಿರುವುದು ತಪ್ಪು. ಕೇವಲ 20 ರೂ. ತಾನೇ ಕೊಟ್ಟು ಕೆಲಸ ಮಾಡಿಸಿಕೊಳ್ಳೋಣ ಎಂದು ವಿಧಿ ಇಲ್ಲದೆ ರೈತರು ಅಧಿಕಾರಿಗಳಿಗೆ ಹಣ ಕೊಡುತ್ತಿದ್ದಾರೆ. ಆದರೆ ಕೆಲವೊಬ್ಬರ ಬಳಿ ಲಂಚ ನೀಡಲು 20 ರೂ. ಕೂಡ ಇರುವುದಿಲ್ಲ. ಅಂಥವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.