-ಹಣ ಕೊಟ್ಟಿಲ್ಲ ಅಂದ್ರೆ ಮುಂದಕ್ಕೋಗಲ್ಲ ಫೈಲು
ಕೊಪ್ಪಳ: ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ನೂರಾರು ಕೋಟಿ ರೂಪಾಯಿ ಮೀಸಲಿಡುತ್ತೆ. ಆದರೆ ಅಧಿಕಾರಿಗಳ ಲಂಚಬಾಕತನದಿಂದ ಈ ಭಾಗದ ಜಿಲ್ಲೆಗಳಲ್ಲಿ ಪ್ರತಿಯೊಂದು ಕಾಮಗಾರಿಗೂ ಪರ್ಸೆಂಟೆಜ್ ಲೆಕ್ಕದಲ್ಲಿ ಲಂಚ ನೀಡಬೇಕಾದ ಪರಿಸ್ಥಿತಿ ಇದೆ.
ಹೌದು. ಅಭಿವೃದ್ಧಿಯ ದೃಷ್ಠಿಯಿಂದ ಸಿಎಂ ಯಡಿಯೂರಪ್ಪ ಅವರು ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದ್ದಾರೆ. ಆದರೆ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ. ಕೊಪ್ಪಳದ ಪಂಚಾಯತ್ ರಾಜ್ ಕಚೇರಿಯಲ್ಲಿರುವ ಎಚ್.ಕೆ.ಆರ್.ಡಿ.ಬಿ ನಿಗಮದಲ್ಲಿ ಲಂಚಾವತಾರಕ್ಕೆ ಬ್ರೇಕ್ ಬಿದ್ದಿಲ್ಲ. ಕಾಮಗಾರಿ ನಡೆಯಬೇಕು ಎಂದರೆ 30% ಲಂಚ ಕೊಡಲೇಬೇಕೆಂದು ಇಲ್ಲಿನ ಅಧಿಕಾರಿ ನಾರಾಯಣಸ್ವಾಮಿ ಮುಲಾಜಿಲ್ಲದೆ ಗುತ್ತಿಗೆದಾರರ ಬಳಿ ಬೇಡಿಕೆ ಇಡುತ್ತಾರೆ.
ಗುತ್ತಿಗೆದಾರರು ನಮಗೆ ಏನೂ ಉಳಿಯೋದಿಲ್ಲ ಸರ್ ಕೊಡಕ್ಕೆ, ತೆಲೆಕೆಟ್ಟುಹೋಗಿದೆ. ನಮಗೆ 31 ಪರ್ಸೆಂಟೇಜ್ ಬರುತ್ತೆ, ಅದರಲ್ಲಿ ನಿಮಗೆಲ್ಲಿಂದ ಕೊಡೋದು ಎಂದರೆ, ಅಧಿಕಾರಿ ನಾರಾಯಣಸ್ವಾಮಿ ನಾವು ಇಲ್ಲಿ ತುಂಬಾ ಜನಕ್ಕೆ ಕೊಡಬೇಕು ಹಣ ಕೊಟ್ಟು ಕಾಮಗಾರಿ ಮಾಡಿ ಎಂದು ನೇರವಾಗಿ ಹಣ ಕೇಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಇಲ್ಲಿನ ಅಧಿಕಾರಿಗಳಿಗೆ ಲಂಚ ನೀಡಿದ್ದಲ್ಲದೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡೋ ಕಂಪ್ಯೂಟರ್ ಆಪರೇಟರ್‌ಗಳಿಗೂ ಲಂಚ ನೀಡಬೇಕಾಗಿದೆ. ಅತ್ತ ಅಧಿಕಾರಿ ಹಣ ಪೀಕಿದರೆ, ಇತ್ತ ಕಂಪ್ಯೂಟರ್ ಆಪರೇಟರ್ ಕೂಡ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಪಂಚಾಯತ್ ರಾಜ್ ಕಚೇರಿಯ ಕಂಪ್ಯೂಟರ್ ಆಪರೇಟರ್ ಆದೇಪ್ಪನಿಗೆ ಮಾಮೂಲಿ ಕೊಟ್ಟರೇನೆ ಆತ ಫೈಲ್ ಮುಂದಕ್ಕೆ ಕಳಿಹಿಸುತ್ತಾನೆ. ಇಲ್ಲದಿದ್ದರೆ ಯಾವ ಕೆಲಸನೂ ಆಗಲ್ಲ. ಯಾರು ಮೊದಲು ಕಮಿಷನ್ ಕೊಡುತ್ತಾರೋ ಅವರ ಕೆಲಸ ಬೇಗ ಆಗುತ್ತೆ. ಹಣ ಕೊಡು ನಿನ್ನ ಕೆಲಸ ನಾನು ಮಾಡಿಸಿ ಕೊಡುತ್ತೇನೆ ಎಂದು ಆದೇಪ್ಪ ಗುತ್ತುಗೆದಾರರಿಗೆ ಹೇಳಿದ ದೃಶ್ಯಗಳು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.
ರಾಜ್ಯಸರ್ಕಾರ ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳ ಅಭಿವೃದ್ಧಿಗೆ ಪ್ರತಿ ವರ್ಷ 300 ಕೋಟಿ ಹಣ ಮೀಸಲಿಡುತ್ತೆ. ಆದರೆ ಅಧಿಕಾರಿಗಳು, ಗುತ್ತಿಗೆದಾರರ ಲಂಚಬಾಕತನದಿಂದ ಯೋಜನೆಗಳು ಹಳ್ಳ ಹಿಡಿಯುತ್ತಿವೆ. ಈಗಲಾದರು ಸರ್ಕಾರ ಇಂತಹ ಲಂಚಕೋರರ ವಿರುದ್ಧ ಕ್ರಮ ಕೈಗೊಂಡು, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪಣತೊಡಬೇಕಾಗಿದೆ.