ಯಾದಗಿರಿ: ಕೃಷ್ಣಾ ನದಿ ಪ್ರವಾಹದಿಂದಾಗಿ ಹುಣಸಿಗಿ ತಾಲೂಕಿನ ನೀಲಕಂಠರಾಯನ ಗಡ್ಡಿ ಗ್ರಾಮವು ನಡುಗಡ್ಡೆಯಾಗಿತ್ತು. ಗ್ರಾಮದ ಗರ್ಭಿಣಿಯೊಬ್ಬರು ಚಿಕಿತ್ಸೆ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಯಾದಗಿರಿ ಜಿಲ್ಲಾಡಳಿತವು ಗರ್ಭಿಣಿಯನ್ನು ರಕ್ಷಣೆ ಮಾಡಿದೆ.
ನೀಲಕಂಠರಾಯನ ಗಡ್ಡಿ ಗ್ರಾಮ ನಡುಗಡ್ಡೆಯಾಗಿದ್ದು, ಕೃಷ್ಣಾ ನದಿ ಪ್ರವಾಹಕ್ಕೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಿಂದ ಹೊರಬಾರದ ಸ್ಥಿತಿಯಲ್ಲಿ ಅಲ್ಲಿನ ಜನರಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರೆಳಲು ಮಾರ್ಗವಿಲ್ಲದೆ ವೃದ್ಧರು ಹಾಗೂ ಗರ್ಭಿಣಿ ನರಳಾಡುತ್ತಿದ್ದರು. ನೀಲಕಂಠರಾಯನ ಗಡ್ಡಿಯ ನಿವಾಸಿ ಬಸಮ್ಮ(80) ಮತ್ತು ಗರ್ಭಿಣಿ ಹನುಮಂತಮ್ಮ ಆಸ್ಪತ್ರೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ನಮ್ಮ ಸಹಾಯಕ್ಕೆ ಯಾರೂ ಕೂಡ ಬರುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದರು.
Advertisement
Advertisement
ಗರ್ಭಿಣಿ ಹನುಮಂತಮ್ಮ ಅನುಭವಿಸುತ್ತಿರುವ ಯಾತನೆಯನ್ನು ಗ್ರಾಮಸ್ಥರೊಬ್ಬರು ತಮ್ಮ ಮೊಬೈಲ್‍ನಲ್ಲಿ ಚಿತ್ರೀಕರಿಸಿ ಪಬ್ಲಿಕ್ ಟಿವಿಗೆ ನೀಡಿದ್ದರು. ಪಬ್ಲಿಕ್ ಟಿವಿಯಲ್ಲಿ ಆಗಸ್ಟ್ 13ರಂದು ಸುದ್ದಿ ಪ್ರಸಾರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಹನುಮಂತಮ್ಮ ಅವರ ರಕ್ಷಣೆಗೆ ಮುಂದಾಗಿತ್ತು. ಆದರೆ ಕೃಷ್ಣಾ ನದಿಯ ಆರ್ಭಟ ಜೋರಾಗಿದ್ದರಿಂದ ರಕ್ಷಣಾ ಕಾರ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿತ್ತು. ಶನಿವಾರ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆ ಸಂಜೆ ಅಗ್ನಿಶಾಮಕದಳ ಸಿಬ್ಬಂದಿ ಬೋಟ್ ಮೂಲಕ ಗರ್ಭಿಣಿ ಹನುಮಂತಮ್ಮ ಅವರನ್ನು ರಕ್ಷಣೆ ಮಾಡಿದ್ದಾರೆ.
Advertisement
ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಮತ್ತು ಎಸ್ ಪಿ ಋಷಿಕೇಶ್ ಭಗವಾನ್ ಅವರ ನೇತೃತ್ವದಲ್ಲಿ ಈ ರಕ್ಷಣಾ ಕಾರ್ಯ ನಡೆದಿದೆ. ಸದ್ಯ ಜಿಲ್ಲಾಡಳಿತ ಹನುಮಂತಮ್ಮ ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಆರೈಕೆ ಮಾಡುತ್ತಿದೆ.