ದಾವಣಗೆರೆ: ಅಲ್ಲಿ ಸಡಗರ ಮನೆ ಮಾಡಿತ್ತು. ಮದುವೆ ಮನೆ ಎಂದರೆ ಕೇಳಬೇಕೇ ಸಂಭ್ರಮವೇ ಹೆಚ್ಚು ಆದರೆ ಇಲ್ಲಿ ಸಂಬಂಧಿಕರ ಕಲರವವಿರಲಿಲ್ಲ. ಸ್ನೇಹಿತರು, ಹಿತೈಷಿಗಳು ಹಾಗೂ ಅಧಿಕಾರಿಗಳ ಶುಭಹಾರೈಕೆ ಇತ್ತು. ಸಾಂಪ್ರದಾಯಿಕ ವಾತಾವರಣದಲ್ಲಿ ಸಂಪ್ರದಾಯ ಬದ್ಧವಾಗಿ ಅಧಿಕಾರಿಗಳೇ ಸಂಬಂಧಿಕರ ಸ್ಥಾನದಲ್ಲಿ ನಿಂತು ಇಬ್ಬರು ಯುವತಿಯರಿಗೆ ಧಾರೆಯೆರೆದು ಅವರ ಬಾಳಿಗೆ ಬೆಳಕು ನೀಡಿದ್ದು ವಿಶೇಷವಾಗಿತ್ತು.
Advertisement
ಹೌದು. ದಾವಣಗೆರೆ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀರಾಮನಗರದ ರಾಜ್ಯ ಮಹಿಳಾ ನಿಲಯದಲ್ಲಿಂದು ಇಂದು ವಿವಾಹದ ಸಂಭ್ರಮ ಕಂಡುಬಂದಿತ್ತು. ಹೆತ್ತವರಿಂದ ದೂರವಾಗಿ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಅನಿತಾ ಹಾಗೂ ರೇಣುಕಾ ಗೊರವಪ್ಪನವರ ವಿವಾಹ ಇಂದು ಬೆಳಗ್ಗೆ 11ರಿಂದ 11.30 ವರೆಗೂ ಇದ್ದ ವೃಶ್ಚಿಕ ಲಗ್ನದಲ್ಲಿ ಸಂಭ್ರಮದಿಂದ ಜರುಗಿತು.
Advertisement
Advertisement
ಅನಿತಾ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಾಳೆಕೊಪ್ಪದ ಲೋಲಾಕ್ಷಿ, ಸುಬ್ಬರಾಯ ಹೆಗಡೆಯವರ ಪುತ್ರ ವಿನಾಯಕ ಹೆಗಡೆ ಬಾಳ ಸಂಗಾತಿಯನ್ನಾಗಿಸಿಕೊಂಡರು. ರೇಣುಕಾ ಗೊರವಪ್ಪನವರ ಅವರ ವಿವಾಹ ಶಿರಸಿ ತಾಲೂಕಿನ ಶಿವಳ್ಳಿಯ ಸೀತಾ ಹಾಗೂ ಜನಾರ್ದನ ಸುಬ್ಬರಾಯ ಭಟ್ಟ ಅವರ ಪುತ್ರ ನಾಗೇಂದ್ರಭಟ್ಟ ಅವರೊಂದಿಗೆ ಜರುಗಿತು. ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಪೋಷಕರ ಸ್ಥಾನದಲ್ಲಿ ನಿಂತು ಈ ಇಬ್ಬರು ಯುವತಿಯರಿಗೆ ಧಾರೆ ಎರೆದು ಕೊಟ್ಟಿದ್ದು ವಿಶೇಷವಾಗಿತ್ತು.
Advertisement
ತಮ್ಮ ಮನೆಯ ಮಕ್ಕಳಂತೆ ಅಧಿಕಾರಿಗಳಿಬ್ಬರೂ ಮನಃಪೂರ್ವಕವಾಗಿ ಹರಸಿ ಹೊಸಬಾಳಿಗೆ ಅಡಿಯಿಟ್ಟ ದಂಪತಿಗೆ ಶುಭಾಶಯ ಕೋರಿದರು. ಅನಾಥ ಭಾವದಿಂದ ಕೊರಗುತ್ತಿದ್ದ ಹೆಣ್ಣು ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿದ್ದು ಆ ಕ್ಷಣದಲ್ಲಿ ಕಂಡಿತು.
ಇದರೊಂದಿಗೆ ಮೌಢ್ಯತೆಯ ಅಂಧಕಾರಕ್ಕೆ ಬಲಿಯಾದ ಹೆಣ್ಣು ಮಗಳೊಬ್ಬಳ ಕರುಳಿನ ಕುಡಿಯ ನಾಮಕರಣ ಕೂಡ ಸಂಭ್ರಮದಿಂದ ನಡೆಯಿತು. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಅಣಬೂರು ಗೊಲ್ಲರಹಟ್ಟಿ ನಿವಾಸಿ. ಹುಟ್ಟಿನಿಂದಲೇ ಮಾತು ಬರುತ್ತಿರಲಿಲ್ಲ. ಈ ಮುಗ್ಧ ಮಹಿಳೆ ಮೇಲೆ ಕಳೆದ ಒಂದು ವರ್ಷದ ಹಿಂದೆ ಪಾಪಿಯೊಬ್ಬ ಅತ್ಯಾಚಾರವೆಸಗಿದ್ದ, ಈ ಕಾರಣ ಒಂದು ಗಂಡು ಮಗುವಿಗೆ ಜನ್ಮವಿತ್ತಳು ಮಹಾತಾಯಿ. ವಿಚಿತ್ರ ಎಂದರೆ ಯಾದವ ಸಮುದಾಯದವರಾದ ಈ ಮಹಿಳೆಯನ್ನ ಗ್ರಾಮದಿಂದಲೇ ಹೊರಗೆ ಇಡಲಾಗಿತ್ತು.
ಮೌಢ್ಯತೆ ಹಿನ್ನೆಲೆ ಗ್ರಾಮಸ್ಥರು ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಬಹಿಷ್ಕಾರ ಹಾಕಿದ್ದರು. ಗ್ರಾಮದ ಹೊರವಲಯದಲ್ಲಿ ಮಗುವಿನೊಂದಿಗೆ ಮೂಗ ಮಹಿಳೆ ವಾಸ ಮಾಡುತ್ತಿದ್ದಳು. ಜಿಲ್ಲಾಧಿಕಾರಿಗಳೇ ಗ್ರಾಮಕ್ಕೆ ಭೇಟಿ ನೀಡಿ ಮನವೊಲಿಸಿದ್ದರೂ ಸ್ಥಳೀಯರು ಮಾತ್ರ ಮಹಿಳೆ ಗ್ರಾಮ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ನಂತರ ಜಿಲ್ಲಾಧಿಕಾರಿಗಳು ದಾವಣಗೆರೆಯ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಕಲ್ಪಿಸಿದ್ದರು. ಇದೀಗ ಆ ಮಗುವಿಗೆ ಜಿಲ್ಲಾಡಳಿ ನೇತೃತ್ವದಲ್ಲಿ ನಾಮಕರಣ ಮಾಡಲಾಯಿತು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕಂದಮ್ಮನ ಕಿವಿಯಲ್ಲಿ ಮೂರು ಬಾರಿ ಮಗುವಿನ ಹೆಸರು ಹೇಳಿ ನಾಮಕರಣ ಮಾಡಿದರು.