ರೈತರ ಕೊರಳಿಗೆ ಕ್ರಿಮಿನಲ್‍ಗಳಂತೆ ಸ್ಲೇಟ್ ಹಾಕಿ ಫೋಟೋ ತೆಗೆಸಿದ ಅಧಿಕಾರಿಗಳು

Public TV
1 Min Read
formar e1569937001576

– ಜಮೀನು ವಿವರ ನೀಡುವ ವೇಳೆ ಘಟನೆ

ಭೋಪಾಲ್: ಕೃಷಿ ಭೂಮಿಯ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ರೈತರು ಕ್ರಿಮಿನಲ್‍ಗಳಂತೆ ತಮ್ಮ ಜಮೀನಿನ ಸ್ವಯಂ ವಿವರವನ್ನು ಸ್ಲೇಟ್ ಮೇಲೆ ಬರೆದುಕೊಂಡು ಕೊರಳಿಗೆ ಹಾಕಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸೂಚಿಸಿರುವ ಘಟನೆ ಮಧ್ಯಪ್ರದೇಶದ ವಿದಿಶಾದ ಮನೋರಾದಲ್ಲಿ ನಡೆದಿದೆ.

ಇದಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನಾವು ‘ಆಹಾರ ಪೂರೈಕೆದಾರರು ಬದಲಿಗೆ ಅಪರಾಧಿಗಳಲ್ಲ’ ಇದರಿಂದ ಅವಮಾನಕ್ಕೊಳಗಾಗಿದ್ದೇವೆ ಎಂದು ತಿಳಿಸಿದ್ದಾರೆ. ನಮ್ಮ ಕೃಷಿ ಭೂಮಿಯ ಅಳತೆ ತೆಗೆದುಕೊಳ್ಳುವ ಸಂದರ್ಭದಲ್ಲಿ ನಮ್ಮ ಕುತ್ತಿಗೆಗೆ ಸ್ಲೇಟ್ ಧರಿಸುವಂತೆ ಸೂಚಿಸಲಾಯಿತು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಇದರಿಂದ ನಮಗೆ ತೀವ್ರ ಮುಜುಗರವಾಯಿತು. ಹೀಗಾಗಿ ನಾನು ಸ್ಲೇಟ್‍ನ್ನು ಕೊರಳಿಗೆ ಹಾಕಿಕೊಳ್ಳಲಿಲ್ಲ. ಆದರೆ ಅಧಿಕಾರಿಗಳು ರೈತರು ಬೆಳೆಗಳ ವಿವರವನ್ನು ಸ್ಲೇಟ್‍ಗಳ ಮೇಲೆ ಬರೆದು ಹಾಕಿಕೊಳ್ಳಿ ಎಂದಿದ್ದರು. ರೈತರು ಬಿತ್ತಿ, ಬೆಳೆದು ಆಹಾರ ಒದಗಿಸುವವರು, ಅವರ ಬಗ್ಗೆ ಈ ರೀತಿಯ ವರ್ತನೆ ಸರಿಯಾದ ಕ್ರಮವಲ್ಲ. ಈ ಘಟನೆಯನ್ನು ನಾವು ಖಂಡಿಸುತ್ತೇವೆ ಎಂದು ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದಿಶಾದ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಯಾಂಕ್ ಅಗರ್‍ವಾಲ್ ಮಾತನಾಡಿ, ರೈತರಿಂದ ಈ ಕುರಿತು ದೂರು ಬಂದ ತಕ್ಷಣ ಈ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಈ ಕುರಿತು ತಹಶೀಲ್ದಾರರಿಗೆ ನೋಟಿಸ್ ನೀಡಲಾಗಿದೆ. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇಂತಹ ನಡವಳಿಕೆ ಒಪ್ಪುವಂತಹದ್ದಲ್ಲ, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *