ಬೆಂಗಳೂರು: ನಗರದಲ್ಲಿ ಅನೇಕ ಪುರಾತನ ದೇವಾಲಯಗಳಿವೆ. ಅವುಗಳಲ್ಲಿ ಕೆಲವು ದೇವಾಯಲಗಳನ್ನ ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತಿದೆ. ಆದರೆ ಲಕ್ಷಾಂತರ ರೂಪಾಯಿಗಳ ಅನುದಾನ ಪಡೆದು ಅಭಿವೃದ್ಧಿ ಹೆಸರಲ್ಲಿ ಸರ್ಕಾರಕ್ಕೆ ದತ್ತಿ ಇಲಾಖೆ ಮೋಸ ಮಾಡುತ್ತಿದೆ.
ಧಾರ್ಮಿಕ ದತ್ತಿ ಇಲಾಖೆಯಡಿ ಕೆಲಸ ಮಾಡೋ ಪೂಜಾರಿ, ತಮ್ಮ ದಿನಭತ್ಯೆ ಪಡೆಯೋಕೂ ಇಲ್ಲಿ ಲಂಚ ಕೊಡಬೇಕು. ಎಷ್ಟು ರಾಜಾರೋಷವಾಗಿ ಅಂದ್ರೆ ನನ್ನ ಮೇಲೆ ಬಂಡವಾಳ ಹಾಕಿ ಅಂತಾ ಬೆಂಗಳೂರಿನ ಉತ್ತರ ವಿಭಾಗದ ಶಿರಸ್ತೇದಾರ್ ಕೇಳುತ್ತಾರೆ. ಜೊತೆಗೆ ಲೇಡಿ ಕ್ಲರ್ಕ್ ಕೂಡಾ 50 ಸಾವಿರ ರೂ. ಕೊಟ್ಟು ಬಿಡಿ, ಎಲ್ಲವನ್ನು ಮಾಡಿಕೊಡ್ತಿವಿ ಅಂತಾ ಬಾಯಿಬಿಟ್ಟು ಕೇಳುತ್ತಾರೆ.
ಬಳೇಪೇಟೆಯ ಕಾಶಿ ವಿಶ್ವನಾಥ ದೇವಸ್ಥಾನದ ಪೂಜಾರಿ ಮನೆ ಅಭಿವೃದ್ಧಿಗೆ ಇಲಾಖೆಯಿಂದ 3 ಲಕ್ಷ ರೂ. ಮಂಜೂರಾಗಿ ವರ್ಷ ಕಳೆದಿದೆ. ಇದೇ ಬಳೇಪೇಟೆಯಲ್ಲಿರುವ ವೆಂಕಟೇಶ್ವರ ದೇವಾಲಯದ ಪಾಕಶಾಲೆಗೆ ಬರೋಬ್ಬರಿ 7 ಲಕ್ಷ ರೂಪಾಯಿ ಮಂಜೂರಾಗಿದೆ. ಆದ್ರೇ ಪಾಕಶಾಲೆ ಮಾತ್ರ ಇವತ್ತೋ ನಾಳೆನೋ ಬೀಳೋ ಸ್ಥಿತಿಯಲ್ಲಿದೆ.
ಇನ್ನು ಮಲ್ಲೇಶ್ವರಂನಲ್ಲಿರುವ ಇತಿಹಾಸ ಪ್ರಸಿದ್ಧ ವೇಣುಗೋಪಾಲ ದೇವಾಲಯದಲ್ಲಿ ಭದ್ರತಾ ಸಿಬ್ಬಂದಿಯ ಕೊಠಡಿಗೆ 3 ಲಕ್ಷ ರೂ. ಮಂಜೂರಾಗಿದೆ. ಆದರೆ ಈ ಹಣ ಅಧಿಕಾರಿಗಳ ಹೊಟ್ಟೆ ಸೇರಿದೆ. ಅಷ್ಟೇ ಅಲ್ಲ ಲಕ್ಷ್ಮೀನರಸಿಂಹ ದೇವಾಲಯದ ಚಪ್ಪಲಿ ಸ್ಟ್ಯಾಂಡ್‍ಗೆ 2 ಲಕ್ಷದ 77 ಸಾವಿರ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಆದರೆ ಅಲ್ಲಿ ಚಪ್ಪಲಿ ಸ್ಟ್ಯಾಂಡ್ ಸಹ ಇಲ್ಲ.
ಸರ್ಕಾರ ದೇವಸ್ಥಾನಗಳ ಅಭಿವೃದ್ಧಿಗಾಗಿ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಅನುದಾನ ಮಾತ್ರ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಹೀಗಾಗಿ ತಪ್ಪಿಸ್ಥತರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.