ಚಿಕ್ಕಬಳ್ಳಾಪುರ: ಕಂಪ್ಯೂಟರ್ ಆಪರೇಟರ್ ಜೊತೆ ಆಟ ನಡೆಸಿ, ಬರೋಬ್ಬರಿ 60 ಲಕ್ಷಕ್ಕೂ ಅಧಿಕ ಹಣ ದುರುಪಯೋಗ ಪಡಿಸಿಕೊಂಡಿದ್ದ ತಿರಮಲ-ತಿರುಪತಿಯ ಕರ್ನಾಟಕ ರಾಜ್ಯ ಛತ್ರದ ವಿಶೇಷಾಧಿಕಾರಿ ವೆಂಕಟರಮಣ ಗುರುಪ್ರಸಾದ್‍ರನ್ನು ಅಮಾನತು ಮಾಡಲಾಗಿದೆ. ರಾಜ್ಯ ಸರ್ಕಾರದ ಕಂದಾಯ ಇಲಾಖೆ (ಮುಜರಾಯಿ) ಅಧೀನ ಕಾರ್ಯದರ್ಶಿ ಎಂ ಎಲ್ ವರಲಕ್ಷ್ಮೀ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಅಮಾನತು ಯಾಕೆ?
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮದ ಅಶ್ವತ್ಥನಾರಾಯಣಸ್ವಾಮಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ವೆಂಕಟರಮಣ ಗುರುಪ್ರಸಾದ್ ಬರೋಬ್ಬರಿ 60 ಲಕ್ಷಕ್ಕೂ ಆಧಿಕ ಮೊತ್ತದ ಹಣ ದುರುಪಯೋಗ ಪಡಿಸಿಕೊಂಡು ಕರ್ತವ್ಯ ಲೋಪ ಎಸಗಿದ್ದರು. ಈ ಬಗ್ಗೆ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಗೌರಿಬಿದನೂರು ತಹಶೀಲ್ದಾರ್ ಶ್ರೀನಿವಾಸ್ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಇದನ್ನೂ ಓದಿ: ಕಂಪ್ಯೂಟರ್ ಆಪರೇಟರ್ ಜೊತೆ ಸರ್ಕಾರಿ ಅಧಿಕಾರಿ ಆಟ – ದೇವರಿಗೆ 60 ಲಕ್ಷ ರೂ. ಪಂಗನಾಮ
Advertisement
Advertisement
ವರದಿ ನಂತರ ಸರ್ಕಾರ ಈ ಹಿಂದೆ ವಿದುರಾಶ್ವತ್ಥ ದೇವಾಲಯಕ್ಕೂ ಮುನ್ನ ಘಾಟಿ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲೂ ವೆಂಕಟರಮಣ ಗುರುಪ್ರಸಾದ್ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿನ ದಾಖಲೆಗಳ ತನಿಖೆ ನಡೆಸಿದೆ. ಘಾಟಿ ದೇವಾಲಯದಲ್ಲೂ ಸಹ ವೆಂಕಟರಮಣ ಗುರುಪ್ರಸಾದ್ 30 ಲಕ್ಷಕ್ಕೂ ಅಧಿಕ ಮೊತ್ತದ ಹಣ ದುರುಪಯೋಗ ಮಾಡಿಕೊಂಡಿರೋದು ಮೇಲ್ನೋಟಕ್ಕೆ ಸಾಬೀತಾಗಿದೆ. ವಿದುರಾಶ್ವತ್ಥ ದೇವಾಲಯದಲ್ಲಿ ಅವ್ಯವಹಾರದ ವರದಿ ಬಗ್ಗೆ ಪಬ್ಲಿಕ್ ಟಿವಿ ಈ ಹಿಂದೆಯೇ ಸುದ್ದಿ ಪ್ರಕಟಿಸಿತ್ತು. ಸದ್ಯ ತಿರುಮಲ ತಿರುಪತಿ ರಾಜ್ಯದ ಛತ್ರದ ವಿಶೇಷಾಧಿಕಾರಿಯಾಗಿದ್ದ ವೆಂಕಟರಮಣ ಗುರುಪ್ರಸಾದ್‍ರನ್ನ ಕರ್ನಾಟಕ ನಾಗರೀಕ ಸೇವೆಗಳ ನಿಯಮದಡಿ ಅಮಾನತು ಮಾಡಿ ಆದೇಶಿಸಲಾಗಿದೆ.
Advertisement
ವರದಿಯಲ್ಲಿ ಏನಿದೆ?
ವೆಂಕಟರಮಣ ಗುರುಪ್ರಸಾದ್ 2017ರ ಆಗಸ್ಟ್ 02 ರಿಂದ 2019ರ ಆಗಸ್ಟ್ 26ರವರೆಗೆ ವಿದುರಾಶ್ವತ್ಥನಾರಾಯಣ ದೇಗುಲದಲ್ಲಿ ಕಾರ್ಯ ನಿರ್ವಹಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ಸಮಯದಲ್ಲಿ ಚೆಕ್‍ಗಳ ವಿತರಣೆಯಲ್ಲಿ ಲೋಪ ದೋಷಗಳನ್ನು ಮಾಡಿ ಹಣ ದುರ್ಬಳಕೆ ಆಗಿರುವುದು ಕಂಡುಬಂದಿತ್ತು. ಚೆಕ್ ವಿತರಣೆ ಉಸ್ತುವಾರಿ ವಹಿಸಿಕೊಂಡಿದ್ದ ಡಾಟಾ ಎಂಟ್ರಿ ಆಪರೇಟರ್ ಶೃತಿ ಅಧಿಕಾರಿಗಳಿಗೆ ಸಮರ್ಪಕ ಉತ್ತರ ನೀಡದೆ ಹಾರಿಕೆ ಉತ್ತರ ನೀಡಿರುತ್ತಾರೆ. ಹೀಗಾಗಿ ಪರಿಶೀಲನೆ ವೇಳೆ ಮೇಲ್ನೋಟಕ್ಕೆ ಅರ್ಚಕರ ದೀಪಾರಾಧನೆಗೆ ಅಂತ 50 ಸಾವಿರ ರೂ. ಹೆಚ್ಚುವರಿ ಹಣ, ಮುಡಿ ತೆಗೆಯುವವರಿಗೆ ಅಂತ 7,57,779 ರೂ. ನೀಡಲಾಗಿತ್ತು.
Advertisement
ಶೃತಿ ತಾಯಿ ಪರಿಮಳಾ ಅವರಿಗೆ ಅನಾವಶ್ಯಕವಾಗಿ 7,27,000 ರೂ. ನೀಡಲಾಗಿದೆ. ದೇವಾಲಯದ ನಾಗಪ್ರತಿಷ್ಠೆ ಸೇವಾಕರ್ತರ ಊಟೋಪಚಾರಕ್ಕಾಗಿ 18.85 ಲಕ್ಷದ ರೂ. ಹೆಚ್ಚುವರಿ ಹಣ, ಅನಾಮಧೇಯರಿಗೆ ಅನಾವಶ್ಯಕವಾಗಿ 2.58 ಲಕ್ಷ ರೂಪಾಯಿ ವಿತರಿಸಿದ್ದಾರೆ. ಹೀಗೆ ದೇವಾಲಯದ ಹಣದಲ್ಲಿ 60 ಲಕ್ಷ ರೂಪಾಯಿಗೂ ಅಧಿಕ ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಬಗ್ಗೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗೆ ವರದಿ ನೀಡಿರುವುದಾಗಿ ತಹಶೀಲ್ದಾರ್ ಶ್ರೀನಿವಾಸ್ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದರು.
ಅವ್ಯವಹಾರ ಹೇಗೆ?
ದೇವಾಲಯದಲ್ಲಿ ನಾಗಪ್ರತಿಷ್ಠಾಪನೆ ಮಾಡುವ ಭಕ್ತರ ಅನುಕೂಲ ಊಟೋಪಚಾರಕ್ಕೆ ಅಂತ ದೇವಾಲಯದ ನಿಧಿಯಿಂದ ಒಂದು ನಾಗಪ್ರತಿಷ್ಠಪನಾ ಕಾರ್ಯಕ್ಕೆ ತಲಾ 800 ರೂಪಾಯಿ ಖರ್ಚು ಮಾಡಬಹುದು. ಹೀಗೆ 2019 ಏಪ್ರಿಲ್ 1ರಿಂದ 2019ರ ಆಗಸ್ಟ್ 31 ರವರೆಗೆ 363 ನಾಗಪ್ರತಿಷ್ಠಾಪನೆ ಆಗಿದೆ. ಆ ಭಕ್ತರಿಗೆ 2,90,400 ರೂಪಾಯಿ ಖರ್ಚು ಮಾಡಬಹುದು. ಆದರೆ ನಾಗಪ್ರತಿಷ್ಠಾಪನೆ ಊಟೋಪಚಾರದ ಹೆಸರಲ್ಲಿ ಹೆಚ್ಚುವರಿಯಾಗಿ 18.85 ಲಕ್ಷ ರೂಪಾಯಿ ಹಣ ಡ್ರಾ ಮಾಡಿದ್ದಾರೆ. ಹೀಗೆ ಮುಡಿ ತೆಗೆಯುವವರಿಗೆ 600 ರೂಪಾಯಿ ಕೊಡುವ ವ್ಯವಹಾರದಲ್ಲಿ 60 ಸಾವಿರ ರೂ.ನಂತೆ ಹಣ ಡ್ರಾ ಮಾಡಿ ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದಾರೆ.
ಈ ಸಂಬಂಧ ದೇವಾಲಯದ ಖಾತೆಯಿಂದ ಚೆಕ್ ಪಡೆದವರನ್ನು ಕರೆಸಿ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ನಮಗೆ ಅಷ್ಟೊಂದು ದೊಡ್ಡ ಮೊತ್ತದ ಹಣ ಪಾವತಿಯಾಗಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ. ಈ ವೇಳೆ ಡಾಟಾ ಎಂಟ್ರಿ ಆಪರೇಟರ್ ಶೃತಿ ಹಾಗೂ ಸ್ವೀಪರ್ ಸುರೇಶ್ ನಮಗೆ ಬರಬೇಕಾದ ಹಣವನ್ನು ನಗದು ರೂಪದಲ್ಲಿ ನೀಡಿ ಚೆಕ್ ಅನ್ನು ಅವರೇ ಬ್ಯಾಂಕಿನಲ್ಲಿ ಡ್ರಾ ಮಾಡಿಕೊಳ್ಳುತ್ತಿದ್ದರು. ಚೆಕ್‍ಗಳಲ್ಲಿ ಎಷ್ಟು ಮೊತ್ತದ ಹಣ ಇರುತ್ತಿತ್ತು ಎಂಬುದು ನಮಗೆ ಗೊತ್ತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ಶೃತಿ ಹಾಗೂ ಸುರೇಶ್ ಮೌನ ವಹಿಸಿದ್ದು, ತಪ್ಪನ್ನ ಒಪ್ಪಿಕೊಂಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.