ಚಿಕ್ಕಬಳ್ಳಾಪುರ: ಜಮೀನು ಸರ್ವೆ ಮಾಡಲು 15 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ ಭೂ ಮಾಪನ ಅಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ನಡೆದಿದೆ.
ಎಡಿಎಲ್‍ಆರ್ ಕಚೇರಿಯ ಲಕ್ಷ್ಮಣ್ ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಸರ್ಕಾರಿ ಭೂ ಮಾಪನ ಅಧಿಕಾರಿ. ದೇವನಹಳ್ಳಿ ತಾಲೂಕಿನ ಸೋಲೂರು ಗ್ರಾಮದ ಸರ್ವೇ ನಂ 5 ಗೋಮಾಳದ ಜಮೀನನ ಪೈಕಿ 2 ಎಕರೆ ಜಮೀನನನ್ನು ನಾರಾಯಣಪ್ಪ ಎಂಬವರು ಅಕ್ರಮವಾಗಿ ಪೋಡಿ ಮಾಡಿಸಿಕೊಂಡಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದರು. ಈ ಸಂಬಂಧ ನಾರಾಯಣಪ್ಪ ಅವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.
ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಕೋರ್ಟ್, ಜಮೀನು ಸರ್ವೇ ಮಾಡುವಂತೆ ಎಡಿಎಲ್‍ಆರ್ ಭೂ ಮಾಪನ ಲಕ್ಷ್ಮಣ್ ಅವರಿಗೆ ಸೂಚನೆ ನೀಡಿತ್ತು. ಆದರೆ ಸರ್ವೇ ಮಾಡಲು ಹೋದ ಲಕ್ಷ್ಮಣ್ 15 ಸಾವಿರ ರೂ. ಲಂಚ ನೀಡುವಂತೆ ಗ್ರಾಮಸ್ಥರಿಗೆ ಕೇಳಿದ್ದರು. ಲಂಚ ಕೇಳಿದಕ್ಕೆ ಕೋಪಗೊಂಡ ಗ್ರಾಮಸ್ಥರು, ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಲಕ್ಷ್ಮಣ್ ಅವರು ಗ್ರಾಮಸ್ಥರಿಂದ ತಾಲೂಕು ಕಚೇರಿಯ ಹೊರಗಡೆ ಇರುವ ಟೀ ಅಂಗಡಿ ಬಳಿ ಇಂದು 15 ಸಾವಿರ ರೂ. ಲಂಚ ಪಡೆಯುತ್ತಿದ್ದರು. ಈ ವೇಳೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಲಕ್ಷ್ಮಣ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಕೊಂಡಿದ್ದಾರೆ.