ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ನೇತೃತ್ವದಲ್ಲಿ ತುಂಬೆ ಕಿಂಡಿ ಆಣೆಕಟ್ಟು ಬಳಿ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿ ಗಂಗಾಪೂಜೆಯನ್ನು ನೆರವೇರಿಸಲಾಯಿತು.
ಬಳಿಕ ಮಾತನಾಡಿದ ಮನೋಜ್ ಕುಮಾರ್, ಮಂಗಳೂರಿಗೆ ಅನೇಕ ವರ್ಷಗಳಿಂದ ನೀರುಣಿಸುತ್ತಿರುವ ನೇತ್ರಾವತಿ ನದಿ ನಮಗೆ ತಾಯಿ ಸಮಾನ. ಜನರಿಗೆ ಕೃಷಿಗೆ, ಬದುಕಿಗೆ ಬೇಕಾದ ನೀರು ನಿರಂತರವಾಗಿ ಹರಿಸುತ್ತಿರುವ ನೇತ್ರಾವತಿ ನದಿಯಲ್ಲಿ ಸದ್ಯ ಆರು ಮೀಟರ್ ನೀರಿದೆ. ಹೀಗಾಗಿ ಈ ಬಾರಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ತೀರಾ ಕಡಿಮೆ. ದೇವರ ದಯೆಯಿಂದ ಈ ಬಾರಿಯೂ ಜನರಿಗೆ ನೀರು ಬೇಕಾದಷ್ಟು ಸಿಗಲಿ. ಎಡಿಬಿ 780 ಕೋಟಿ ರೂ. ವೆಚ್ಚದಲ್ಲಿ ಜಲಸಿರಿಯ ಕಾಮಗಾರಿ ನಡೆಯುತ್ತಿದ್ದು ಅದು ಪೂರ್ಣಗೊಂಡಲ್ಲಿ ದಿನದ 24 ಗಂಟೆಯೂ ಮಂಗಳೂರಿಗೆ ನೀರು ಸಿಗಲಿದೆ. ನದಿ ಸಮೃದ್ಧವಾಗಿ ಹರಿಯಲಿ, ಮಂಗಳೂರಿನ ಜನರ ಬದುಕು ಹಸನಾಗಲಿ ಎಂದಿದ್ದಾರೆ. ಇದನ್ನೂ ಓದಿ: ಕೋರ್ಟ್ ಹಾಲ್‌ನಲ್ಲಿ ಪವಿತ್ರಾ, ದರ್ಶನ್ ದೂರ ದೂರಾ – ಕಣ್ಣೀರಿಡುತ್ತ ತೆರಳಿದ ಗೆಳತಿ!
ಪಾಲಿಕೆ ವಿಪಕ್ಷ ನಾಯಕ ಅನಿಲ್ ಕುಮಾರ್ ಮಾತನಾಡಿ, ಪ್ರತೀ ವರ್ಷ ವಾಡಿಕೆಯಂತೆ ಗಂಗಾಪೂಜೆ ನೆರವೇರಿಸಿದ್ದೇವೆ. 2019ರ ಬಳಿಕ ನಮಗೆ ಅಷ್ಟಾಗಿ ನೀರಿನ ಸಮಸ್ಯೆ ಎದುರಾಗಿಲ್ಲ. ಸೆಖೆ, ಒಣಹವೆ ಹೆಚ್ಚಾದಂತೆ ನೀರು ಆವಿಗೊಳ್ಳುತ್ತದೆ. ಹೀಗಾಗಿ ಈ ಬಾರಿ ಯಾವುದೇ ಸಮಸ್ಯೆ ಬಾರದಿರಲಿ ಎಂದು ಒಮ್ಮತದಿಂದ ಪೂಜೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಾತನಾಡಿ, ಜನರಿಗೆ ನೀರು ಪೂರೈಕೆ ಮಾಡುವಲ್ಲಿ ರಾಜ್ಯದಲ್ಲೇ ಮಂಗಳೂರು ಮಹಾನಗರ ಪಾಲಿಕೆ ಪ್ರಥಮ ಸ್ಥಾನದಲ್ಲಿದೆ. ಬೇರೆಲ್ಲಾ ಪಾಲಿಕೆಗಳು ಮೂರು ದಿನಕ್ಕೊಮ್ಮೆ ನೀರು ಕೊಡುತ್ತಿವೆ. ಆದರೆ ಇಲ್ಲಿ ಅಂತಹ ಸ್ಥಿತಿಯಿಲ್ಲ. ನೀರಿನ ಪೂರೈಕೆಗಾಗಿ ಪಾಲಿಕೆಯಿಂದ ಅನೇಕ ಹೊಸ ಕಾಮಗಾರಿಗಳು ನಡೆಯುತ್ತಿವೆ. ಇವೆಲ್ಲ ಪೂರ್ಣಗೊಂಡಲ್ಲಿ ಜನರಿಗೆ ಯಾವುದೇ ಸಮಸ್ಯೆ ಬಾರದು. ಈ ಬಾರಿಯೂ ನೇತ್ರಾವತಿ ನದಿಗೆ ಪೂಜೆ ಮಾಡಿದ್ದು ಜನರಿಗೆ ನೀರಿನ ಸಮಸ್ಯೆ ಎದುರಾಗದಿರಲಿ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುಮತಿ, ಅನುದಾನ ನೀಡಿ: ಕೇಂದ್ರಕ್ಕೆ ಡಿಕೆಶಿ ಮನವಿ