ಬೀಜಿಂಗ್: ಎರಡು ವರ್ಷದಿಂದ ತಾವು ಸಾಕಿದ್ದು ನಾಯಿ ಮರಿಯಲ್ಲ, ಕರಡಿ ಎಂದು ಗೊತ್ತಾಗಿ ಕುಟುಂಬವೊಂದು ತಬ್ಬಿಬ್ಬಾದ ಘಟನೆ ಚೀನಾದಲ್ಲಿ ನಡೆದಿದೆ.
ಇಲ್ಲಿನ ಯುನ್ನಾನ್ ನಗರ ನಿವಾಸಿ ಸುಯುನ್ ಎಂಬವರು ಎರಡು ವರ್ಷಗಳ ಹಿಂದೆ ನಾಯಿ ಮರಿಯೊಂದನ್ನು ಖರೀದಿಸಿದ್ರು. ಅದು ದಿನವೂ ಒಂದು ಬಾಕ್ಸ್ ಹಣ್ಣು ಮತ್ತು 2 ಬಕೆಟ್ ನೂಡಲ್ಸ್ ಅನ್ನು ತಿನ್ನುತ್ತಿದ್ದನ್ನು ಕಂಡು ಮನೆಯ ಸದಸ್ಯರಿಗೆ ವಿಚಿತ್ರ ಅನ್ನಿಸಿತ್ತು.
ತಾವು ತಂದಿದ್ದ ಪಪ್ಪಿ(ನಾಯಿ ಮರಿ) ದಿನದಿಂದ ದಿನಕ್ಕೆ ಅದರ ಬೆಳವಣಿಗೆ ಹೆಚ್ಚುತ್ತಲೇ ಹೋಗಿದ್ದು, ಸುಮಾರು 134 ಕೆ.ಜಿ ಯಷ್ಟು ತೂಕ ಪಡೆದುಕೊಂಡಿದೆ. ಅಲ್ಲದೇ ಅದು ಎರಡು ಕಾಲುಗಳ ಮೂಲಕ ನಡೆದಾಡಲು ಪ್ರಾರಂಭಿಸಿದನ್ನು ಕಂಡ ಕುಟುಂಬಸ್ಥರಿಗೆ ಸಂದೇಹ ಬಂದಿದೆ.
ಪ್ರಾಣಿಯು ಉದ್ದ ಕೂದಲು ಹೊಂದಿದ್ದರಿಂದ ಟಿಬೆಟಿಯನ್ ಮಾಸ್ಟಿಫ್ ನಾಯಿ ಜಾತಿಗೆ ಸೇರಿದ್ದು ಎಂದು ತಿಳಿದಿದ್ದರಂತೆ. ಆದರೆ ಅದರ ಬೆಳವಣಿಗೆ ಹಾಗೂ ವರ್ತನೆಯಿಂದ ಕುಟುಂಬದವರಲ್ಲಿ ಅನುಮಾನ ಮೂಡಿಸಿದ್ದು, ನಂತರ ಅದು ನಾಯಿಯಲ್ಲ ‘ಏಷ್ಯಾಟಿಕ್ ಕಪ್ಪು ಕರಡಿ’ ಎಂದು ಗೊತ್ತಾಗಿದೆ. ಕೊನೆಗೆ ಕುಟುಂಬಸ್ಥರು ಕರಡಿಯನ್ನು ಪಂಜರದಲ್ಲಿ ಹಾಕಿ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ಒಪ್ಪಿಸಿದ್ದಾರೆ.
ಸದ್ಯ ಸುಯುನ್ ಅವರ ಸಾಕಿದ್ದ ಕರಡಿಯು ಯುನ್ನಾನ್‍ನ ವನ್ಯಜೀವಿ ಸಂರಕ್ಷಣಾ ಕೇಂದ್ರ ಸೇರಿದೆ.