ಭುವನೇಶ್ವರ: ವಾಮಾಚಾರದ ಅನುಮಾನದ ಮೇಲೆ ಸಿಕ್ಕಿಬಿದ್ದ ಆರು ಜನ ಹಿರಿಯ ನಾಗರಿಕರಿಗೆ ಮಲ ತಿನ್ನುವಂತೆ ಒತ್ತಾಯಿಸಿದ ಅಮಾನವೀಯ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಗಂಜಾಂ ಜಿಲ್ಲೆಯ ಗೋಪಾಪುರ ಗ್ರಾಮದಲ್ಲಿ ಸೋಮವಾರ ಘಟನೆ ನಡೆದಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ 22 ಮಹಿಳೆಯರು ಸೇರಿದಂತೆ ಒಟ್ಟು 29 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಹಿರಿಯ ನಾಗರಿಕರನ್ನು ಜೋಗಿ ದಾಸ್, ಸಾನಿಯಾ ನಹಾಕ್, ಜೋಗೇಂದ್ರ ನಹಾಕ್, ರಾಮ ನಹಾಕ್, ಹರಿ ನಹಾಕ್ ಮತ್ತು ಜುರಿಯಾ ನಹಾಕ್ ಎಂದು ಗುರುತಿಸಲಾಗಿದೆ. ಎಲ್ಲರನ್ನು ಬೆರ್ಹಾಂಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
Advertisement
Advertisement
ಗಂಜಾಂ ಜಿಲ್ಲೆಯ ಗೋಪಾಪುರ ಗ್ರಾಮದಲ್ಲಿ ಕಳೆದ ಆರು ತಿಂಗಳುಗಳಲ್ಲಿ ಮೂವರು ಮಹಿಳೆಯರು ಹಾಗೂ 7 ಜನರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದಕ್ಕೆ ವಾಮಾಚಾರವೇ ಕಾರಣ ಎಂದು ಶಂಕೆ ವ್ಯಕ್ತಪಡಿಸಿದ ಗ್ರಾಮಸ್ಥರು ಆರು ಜನ ಹಿರಿಯ ನಾಗರಿಕರನ್ನು ಸೋಮವಾರ ಸೆರೆ ಹಿಡಿದ್ದರು. ಅದೇ ದಿನ ನಡೆದ ಗ್ರಾಮದ ಸಭೆಯಲ್ಲಿ ಆರು ಜನರನ್ನು ಮನಬಂದಂತೆ ಥಳಿಸಿ, ಹಲ್ಲುಗಳನ್ನು ಕಿತ್ತಿದ್ದಾರೆ ಎಂದು ಗಂಜಾಂ ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಕುಮಾರ್ ರೈ ತಿಳಿಸಿದ್ದಾರೆ.
Advertisement
ಸಂತ್ರಸ್ತರು 50 ರಿಂದ 60 ವರ್ಷದವರಾಗಿದ್ದಾರೆ. ಗ್ರಾಮಸ್ಥರು ಹಲ್ಲೆ ಮಾಡಿದ್ದಲ್ಲದೆ ಮಲ ತಿನ್ನುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಮಹಿಳೆಯರು ಸೇರಿದಂತೆ 29 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಎಲ್ಲರನ್ನೂ ವಿಚಾರಣೆ ನಡೆಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡ ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬ್ರಿಜೇಶ್ ಕುಮಾರ್ ರೈ ಹೇಳಿದ್ದಾರೆ.