ನವದೆಹಲಿ: ಒಡಿಶಾ ರೈಲು ದುರಂತದ (Odisha Train Tragedy) ತನಿಖೆ ಚುರುಕುಗೊಂಡಿದ್ದು ಕೇಂದ್ರೀಯ ತನಿಖಾ ದಳದ (CBI) ವಿಚಾರಣೆಯ ಎದುರಿಸಿದ್ದ ಜ್ಯೂನಿಯರ್ ಎಂಜಿನಿಯರ್ (Signal Junior Engineer) ಕುಟುಂಬದೊಂದಿಗೆ ನಾಪತ್ತೆಯಾಗಿದ್ದಾರೆ.
ಸೊರೋ ಸೆಕ್ಷನ್ ಸಿಗ್ನಲ್ ಆಫೀಸರ್ ಅಮೀರ್ ಖಾನ್ (Amir Khan) ಅವರನ್ನು ಈ ಹಿಂದೆ ಸಿಬಿಐ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿತ್ತು. ಮತ್ತಷ್ಟು ವಿಚಾರಣೆ ನಡೆಸಲು ಸೋಮವಾರ ಸಿಬಿಐ ಅಧಿಕಾರಿಗಳು ಅಮೀರ್ ಖಾನ್ ಮನೆಗೆ ತೆರಳಿದ್ದಾಗ ಮನೆಯಲ್ಲಿ ಯಾರೂ ಇರಲಿಲ್ಲ ಮತ್ತು ಬೀಗ ಜಡಿಯಲಾಗಿತ್ತು. ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಸಿಬಿಐ ಈಗ ಅಮೀರ್ ನೆಲೆಸಿದ್ದ ಬಾಡಿಗೆ ಮನೆಯನ್ನು ಸೀಲ್ ಮಾಡಿದೆ. ಅಷ್ಟೇ ಅಲ್ಲದೇ ಮನೆಯ ಮೇಲೆ ನಿಗಾ ಇಡಲು ಇಬ್ಬರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Advertisement
ಬಾಲಾಸೋರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಆಧಾರದಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ. ಕೆಲ ದಿನಗಳ ಹಿಂದೆ ಬಹನಾಗಾ ರೈಲ್ವೆ ನಿಲ್ದಾಣ, ಅಲ್ಲಿನ ಪ್ಯಾನಲ್ ರೂಂ, ರೆಕಾರ್ಡ್ ರೂಂ, ರಿಲೇ ರೂಂ ಪರಿಶೀಲನೆ ನಡೆಸಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿತ್ತು. ಇದನ್ನೂ ಓದಿ: ಒಡಿಶಾ ದುರಂತ – AI ತಂತ್ರಜ್ಞಾನ ಬಳಸಿ ಛಿದ್ರಗೊಂಡ ಮೃತದೇಹಗಳನ್ನು ರೈಲ್ವೇ ಪತ್ತೆ ಹಚ್ಚಿದ್ದು ಹೇಗೆ?
Advertisement
Advertisement
ಮೂಲಗಳ ಪ್ರಕಾರ, ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಬಹನಾಗಾ ಬಜಾರ್‌ನ ಸ್ಟೇಷನ್ ಮಾಸ್ಟರ್ ಸೇರಿದಂತೆ ಐವರು ರೈಲ್ವೆ ನೌಕರರು ಭಾಗಿಯಾಗಿರುವ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಇತರ ನಾಲ್ವರು ಉದ್ಯೋಗಿಗಳು ಸಿಗ್ನಲಿಂಗ್ ಸಂಬಂಧಿತ ಕೆಲಸದ ಜವಾಬ್ದಾರಿಯನ್ನು ಹೊಂದಿದ್ದರು ಮತ್ತು ಅಪಘಾತದ ಸಮಯದಲ್ಲಿ ಕರ್ತವ್ಯದಲ್ಲಿದ್ದರು.
Advertisement
ಜೂನಿಯರ್ ಎಂಜಿನಿಯರ್ ಪಾತ್ರವೇನು?
ಭಾರತೀಯ ರೈಲ್ವೇಯಲ್ಲಿ ಟ್ರ್ಯಾಕ್ ಸರ್ಕ್ಯೂಟ್‌ಗಳು, ಪಾಯಿಂಟ್ ಯಂತ್ರಗಳು ಮತ್ತು ಇಂಟರ್‌ಲಾಕಿಂಗ್ ಸಿಸ್ಟಮ್‌ಗಳು ಸೇರಿದಂತೆ ಸಿಗ್ನಲಿಂಗ್ ಉಪಕರಣಗಳ ಸ್ಥಾಪನೆ, ನಿರ್ವಹಣೆ ಮತ್ತು ದುರಸ್ತಿಯ ಜವಾಬ್ದಾರಿಯನ್ನು ಜೂನಿಯರ್ ಎಂಜಿನಿಯರ್ ನೋಡಿಕೊಳ್ಳುತ್ತಾರೆ. ರೈಲು ಸುರಕ್ಷಿತವಾಗಿ ಹಳಿಯಲ್ಲಿ ಸಂಚರಿಸಬಹುದೇ? ಬೇಡವೇ ಎಂಬುದನ್ನು ಖಾತರಿ ಪಡಿಸುವಲ್ಲಿ ಜೆಇ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ.
ರೈಲ್ವೇ ಅಧಿಕಾರಿಗಳು ಹೇಳೋದು ಏನು?
ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ (Electronic Interlocking) ವ್ಯವಸ್ಥೆಯಲ್ಲಿನ ಉದ್ದೇಶಪೂರ್ವಕ ಹಸ್ತಕ್ಷೇಪವೇ ಈ ದುರ್ಘಟನೆಗೆ ಕಾರಣ ಎನ್ನುವುದು ರೈಲ್ವೇ ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ರೈಲು ಹಳಿಯಲ್ಲಿ ಸಂಚರಿಸಬೇಕೇ? ಬೇಡವೇ ಎಂಬ ತೀರ್ಮಾನಕ್ಕೆ ಬರಬೇಕಾದರೆ ಹಲವು ಷರತ್ತುಗಳಿವೆ. ಈ ಷರತ್ತುಗಳು ಪೂರೈಸಿದ ಬಳಿಕವೇ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ. ಹಳಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲವೂ ಸರಿಯಿದೆ ಎಂಬ ತೀರ್ಮಾನಕ್ಕೆ ಬಂದ ನಂತರ ಗ್ರೀನ್ ಸಿಗ್ನಲ್ ನೀಡಲಾಗುತ್ತದೆ.
ಒಂದು ವೇಳೆ ಹಳಿಯಲ್ಲಿ ಸಣ್ಣಪುಟ್ಟ ಸಮಸ್ಯೆ ಇದ್ದರೂ ಯಾವುದೇ ಕಾರಣಕ್ಕೂ ಗ್ರೀನ್ ಸಿಗ್ನಲ್ ಬರುವುದೇ ಇಲ್ಲ. ಬದಲಾಗಿ ರೆಡ್ ಸಿಗ್ನಲ್ ಕಾಣಿಸುತ್ತಿದೆ. ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ವ್ಯವಸ್ಥೆ ಬಹಳ ಚೆನ್ನಾಗಿದ್ದು ಸಣ್ಣ ದೋಷವಿದ್ದರೂ ರೆಡ್ ಸಿಗ್ನಲ್ ತೋರಿಸುತ್ತದೆ. ಅಷ್ಟು ಸುಲಭವಾಗಿ ಈ ವ್ಯವಸ್ಥೆಯನ್ನು ಹಾಳುಮಾಡಲು ಸಾಧ್ಯವಿಲ್ಲ. ಭೌತಿಕವಾಗಿ ಹಾಳು ಮಾಡದ ಹೊರತು ಗ್ರೀನ್ ಸಿಗ್ನಲ್ ಬಾರಲು ಸಾಧ್ಯವೇ ಇಲ್ಲ ಎನ್ನುವುದು ರೈಲ್ವೇ ಅಧಿಕಾರಿಗಳ ವಾದ. ಇದನ್ನೂ ಓದಿ: 1 ಫೋನ್ ಕರೆ.. 9 ಅಧಿಕಾರಿಗಳು..; ಒಡಿಶಾ ರೈಲು ದುರಂತದ ಬಳಿಕ ಏನೇನಾಯ್ತು? – ಇಲ್ಲಿದೆ ಪಿನ್ ಟು ಪಿನ್ ಮಾಹಿತಿ
ಏನಿದು ಇಂಟರ್‌ಲಾಕಿಂಗ್ ಸಿಸ್ಟಮ್?
ರೈಲು ಯಾವ ನಿಲ್ದಾಣಕ್ಕೆ ಯಾವ ಟ್ರ್ಯಾಕ್ ಮೂಲಕ ಹೋಗಬೇಕೆಂದು ಎಂಬುದನ್ನು ಇಂಟರ್‌ಲಾಕಿಂಗ್ ಸಿಸ್ಟಮ್ ಮೂಲಕ ನಿರ್ಧಾರ ಮಾಡಲಾಗುತ್ತದೆ. ಮಾರ್ಗ ಬದಲಾವಣೆ, ಹಳಿಯಿಂದ ಹಳಿಗೆ ರೈಲು ಸಂಚಾರ ಮಾರ್ಗವನ್ನು ಇಂಟರ್‌ಲಾಕಿಂಗ್ ಸಿಸ್ಟಮ್ ಮೂಲಕವೇ ಬದಲಾಯಿಸಲಾಗುತ್ತದೆ.
ಅಪಘಾತ ಹೇಗಾಯ್ತು?
ಒಡಿಶಾ ಬಾಲಸೋರ್‌ನ ಬಹನಾಗ ಬಜಾರ್ ರೈಲು ನಿಲ್ದಾಣದಲ್ಲಿ 4 ಹಳಿಗಳು ಇವೆ. ಈ ಪೈಕಿ ಎರಡು ಮುಖ್ಯ ಅಥವಾ ಮೇನ್ ಹಳಿಗಳು ಆಗಿದ್ದರೆ ಇನ್ನು ಎರಡು ಲೂಪ್ ಹಳಿಗಳು. ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದೇ ಇರಲು ಗೂಡ್ಸ್ ರೈಲುಗಳನ್ನು ನಿಲ್ದಾಣದ ಲೂಪ್ ಲೈನಿನಲ್ಲಿ ನಿಲ್ಲಿಸಿರುತ್ತಾರೆ. ಅದೇ ರೀತಿಯಾಗಿ ಒಂದು ಹಳಿಯಲ್ಲಿ ಗೂಡ್ಸ್ ರೈಲನ್ನು ನಿಲ್ಲಿಸಲಾಗಿತ್ತು. ಸಂಜೆಯ ವೇಳೆ ವೇಗವಾಗಿ ಮುಖ್ಯ ಹಳಿಯಲ್ಲಿ ಬರುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಿಸ್ಟಂನಿಂದ ಗೂಡ್ಸ್ ರೈಲು ನಿಂತಿದ್ದ ಹಳಿಯನ್ನು ಪ್ರವೇಶಿಸಿ ಗುದ್ದಿದೆ. ಈ ರೈಲು ಡಿಕ್ಕಿ ಹೊಡೆಯುವ ಸಮಯದಲ್ಲೇ ಇನ್ನೊಂದು ಮುಖ್ಯ ಹಳಿಯಲ್ಲಿ ಬೆಂಗಳೂರಿನಿಂದ ಹೌರಾಗೆ ಹೊರಟಿದ್ದ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬಂದಿದೆ. ಗೂಡ್ಸ್ ರೈಲಿಗೆ ಗುದ್ದಿದ ರಭಸಕ್ಕೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಯಶವಂತಪುರದಿಂದ ಹೊರಟಿದ್ದ ರೈಲಿನ ಕೊನೆಯ ಎರಡು ಬೋಗಿಗಳ ಮೇಲೆ ಬಿದ್ದ ಪರಿಣಾಮ ಸಾವು ನೋವು ಹೆಚ್ಚಾಗಿದೆ.
ಅನುಮಾನ ಯಾಕೆ?
ಪಾರಾದೀಪ್‌ನಿಂದ ಮುಖ್ಯ ಲೈನ್‌ನಲ್ಲಿ ತೆರಳುತ್ತಿದ್ದ ಗೂಡ್ಸ್ ರೈಲನ್ನು ಕೋರಮಂಡಲ್ ರೈಲಿಗೆ ದಾರಿ ಮಾಡಿಕೊಡಲು ಬಹನಾಗ್ ನಿಲ್ದಾಣದಲ್ಲಿ ಲೂಪ್ ಲೈನ್‌ಗೆ ತರಲಾಗಿತ್ತು. ಕೋರಮಂಡಲ್‌ಗೆ ಮುಖ್ಯ ಲೈನ್‌ನಲ್ಲಿ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಇದನ್ನು ತ್ರೂ ಲೈನ್ ಎನ್ನುತ್ತಾರೆ. ಹೀಗೆ ಸಿಗ್ನಲ್ ನೀಡಿದಾಗ ಹಳಿ ಬಳಿಯ ಪಾಯಿಂಟ್ ಬದಲಾಗಬೇಕು. ಕೋರಮಂಡಲ್ ಮುಖ್ಯ ಲೈನ್‌ನಲ್ಲಿ ತೆರಳುವಂತೆ ತ್ರೂ ಆಗಬೇಕು. ಆದರೆ ತ್ರೂ ಆಗಿಲ್ಲ. ಸಿಗ್ನಲ್ ಮತ್ತು ಪಾಯಿಂಟ್ ನಡುವೆ ಲೋಪ ಉಂಟಾಗಿದೆ.
ಸಿಗ್ನಲ್ ಸರಿಯಾಗಿದ್ದರೂ ಪಾಯಿಂಟ್ ಬದಲಾಗದ ಕಾರಣ ಗೂಡ್ಸ್ ಇದ್ದ ಲೂಪ್ ಲೈನ್‌ಗೆ ಕೋರಮಂಡಲ್ ರೈಲು ಪ್ರವೇಶಿಸಿದೆ. ಇಲ್ಲಿ ಸಿಗ್ನಲ್ ಕೊಟ್ಟರೂ ರೈಲು ಲೂಪ್ ಲೈನ್‌ನಲ್ಲಿ ಹೋಗಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ.
ಇದು ವಿಧ್ವಂಸಕ ಕೃತ್ಯವೆ?
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ದುರ್ಘಟನೆಗೆ ಕಾರಣರಾದ ತಪ್ಪಿತಸ್ಥರು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇದು ವಿಧ್ವಂಸಕ ಕೃತ್ಯ ಎಂದು ಖಚಿತವಾಗದ ಹೊರತು ಮೋದಿ ಈ ಪದವನ್ನು ಬಳಸುವ ಸಾಧ್ಯತೆ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಹಿಂದೆ ಸಿಡಿಎಸ್ ಬಿಪಿನ್ ರಾವತ್ ಅವರ ಹೆಲಿಕಾಪ್ಟರ್ ಪತನಗೊಂಡ ಸಮಯದಲ್ಲಿ ಸರ್ಕಾರದ ಕಡೆಯಿಂದ ಯಾವುದೇ ಈ ರೀತಿಯ ಹೇಳಿಕೆ ಬಂದಿರಲಿಲ್ಲ. ಆದರೆ ಇಲ್ಲಿ ಪ್ರಧಾನಿ ಬಾಯಿಯಿಂದಲೇ ಈ ಹೇಳಿಕೆ ಬಂದಿದೆ. ಪ್ರಾಥಮಿಕ ತನಿಖೆ ಮತ್ತು ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ ಎನ್ನಲಾಗುತ್ತಿದೆ.