ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ

Public TV
1 Min Read
ODISHA TRAIN ACCIDENT

ಭುವನೇಶ್ವರ: ಒಡಿಶಾ ರೈಲು ದುರಂತವಾಗಿ (Odisha Train Tragedy) 4 ದಿನ ಕಳೆದರೂ 275 ಮೃತರ ಪೈಕಿ, 101 ಮೃತದೇಹಗಳ ಗುರುತು ಇನ್ನೂ ಪತ್ತೆಯೇ ಆಗಿಲ್ಲ. ಕೇವಲ 55 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಈಸ್ಟರ್ನ್ ಸೆಂಟ್ರಲ್ ರೈಲ್ವೇಯ ವಿಭಾಗೀಯ ರೈಲ್ವೇ ಮ್ಯಾನೇಜರ್ ರಿಂಕೇಶ್ ರಾಯ್ ಅವರು ಈ ಸಂಬಂಧ ಮಾಹಿತಿ ನೀಡಿದ್ದಾರೆ. ಒಡಿಶಾದ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 200 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ- ಪತ್ರದ ಮೂಲಕ ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

Odisha Train Accident 4

ಅಪಘಾತದಲ್ಲಿ ಸುಮಾರು 1,100 ಜನರು ಗಾಯಗೊಂಡಿದ್ದಾರೆ. ಅವರ ಪೈಕಿ ಸುಮಾರು 900 ಜನರನ್ನು ಚಿಕಿತ್ಸೆ ನಂತರ ಡಿಸ್ಚಾರ್ಜ್‌ ಮಾಡಲಾಗಿದೆ. ಸುಮಾರು 200 ಜನರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ 278 ಮಂದಿ ಪೈಕಿ, 101 ಮೃತದೇಹಗಳು ಇನ್ನೂ ಉಳಿದಿವೆ. ಅವರು ಯಾರೆಂಬ ಗುರುತು ಪತ್ತೆಯಾಗಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.

ಭುವನೇಶ್ವರದಲ್ಲಿ ಇರಿಸಲಾಗಿರುವ ಒಟ್ಟು 193 ಶವಗಳಲ್ಲಿ 80 ಶವಗಳನ್ನು ಗುರುತಿಸಲಾಗಿದೆ. ಅದರ ಪೈಕಿ 55 ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಬಿಎಂಸಿಯ ಸಹಾಯವಾಣಿ ಸಂಖ್ಯೆಗೆ 200 ಕ್ಕೂ ಹೆಚ್ಚು ಕರೆಗಳು ಬಂದಿವೆ. ಮೃತದೇಹಗಳನ್ನು ಗುರುತಿಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಶನ್‌ನ ಆಯುಕ್ತ ವಿಜಯ್ ಅಮೃತ್ ಕುಲಂಗೆ ಅವರು ತಿಳಿಸಿದ್ದಾರೆ. ಇದನ್ನೂ ಓದಿ: 275 ಮಂದಿ ಸಾವನ್ನಪ್ಪಿದ ದುರಂತದ ಬೆನ್ನಲ್ಲೇ ಒಡಿಶಾದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು!

ಒಡಿಶಾದ ಬಾಲಾಸೋರ್‌ ಬಳಿ ಪ್ರಯಾಣಿಕರಿದ್ದ ಎರಡು ರೈಲು ಹಾಗೂ ಸರಕುಗಳಿದ್ದ ಒಂದು ರೈಲು ಅಪಘಾತಕ್ಕೀಡಾಗಿದ್ದವು. ಈ ಭೀಕರ ದುರಂತದಲ್ಲಿ ಸುಮಾರು 275 ಮಂದಿ ದುರ್ಮರಣಕ್ಕೀಡಾಗಿದ್ದಾರೆ. 1,100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬೆಚ್ಚಿಬೀಳಿಸುವಂತಹ ದುರಂತಕ್ಕೆ ವಿಶ್ವಾದ್ಯಂತ ವಿಷಾದ ವ್ಯಕ್ತವಾಗಿತ್ತು. ಅಪಘಾತವು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ.

Share This Article