ಭುವನೇಶ್ವರ: ಒಡಿಶಾದ ಬಹನಾಗ್‍ನಲ್ಲಿ ನಡೆದ ಭೀಕರ ರೈಲು ದುರಂತಕ್ಕೆ (Odisha Train Accident) ಸಂಬಂಧಿಸಿದಂತೆ ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಅವರು ಭುವನೇಶ್ವರದ (Bhubaneswar) ರಾಜೀವ್ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಅಪಘಾತ ನಡೆದ ಸ್ಥಳದಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳ ಆಯುಕ್ತರು ಹಾಗೂ ಎನ್‍ಡಿಆರ್‍ಎಫ್ ಮುಖ್ಯಸ್ಥರೊಂದಿಗೆ ಚರ್ಚಿಸಲಾಯಿತು. ಅಲ್ಲದೆ ದುರಂತದಲ್ಲಿ ಕರ್ನಾಟಕದ ಪ್ರಯಾಣಿಕರು ಸಿಲುಕಿ ತೊಂದರೆಗೊಳಗಾಗಿರುವ ಬಗ್ಗೆ ಸಚಿವರು ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ: ಪ್ರಧಾನಿ ಮೋದಿ
ಸಂತೋಷ್ ಲಾಡ್ ಅವರು ಈಗಾಗಲೇ ದುರಂತ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಜೊತೆಗೆ ಕರ್ನಾಟಕದ ಪ್ರಯಾಣಿಕರ ರಕ್ಷಣಾ ಕಾರ್ಯದಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದರು. ಸಚಿವರೊಂದಿಗೆ ರಾಜ್ಯದ ಅಧಿಕಾರಿಗಳು ಸಹ ತೆರಳಿದ್ದಾರೆ. ಅವರು ಆಸ್ಪತ್ರೆ, ಶವಾಗಾರಗಳಿಗೆ ಭೇಟಿ ನೀಡಿ ರಾಜ್ಯದ ಪ್ರಯಾಣಿಕರ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಅಪಘಾತವಾದ ರೈಲುಗಳಲ್ಲಿದ್ದ ಕರ್ನಾಟಕದ ಪ್ರಯಾಣಿಕರ ರಕ್ಷಣೆಗೆ ಕರ್ನಾಟಕ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಬಹುತೇಕ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತದಿಂದ ಪಾರಾಗಿ ಬಂದಿದ್ದವರು ಹೊರಟಿದ್ದ ಬಸ್ ಅಪಘಾತ- ಹಲವರ ಸ್ಥಿತಿ ಗಂಭೀರ