ಭುವನೇಶ್ವರ್: 10 ವರ್ಷಗಳಿಂದ ಪೋಸ್ಟ್ ಆಫೀಸ್ ಗೆ ಬಂದಿದ್ದ ಸುಮಾರು 1 ಸಾವಿರಕ್ಕೂ ಹೆಚ್ಚು ಪತ್ರಗಳನ್ನು ಮತ್ತು ಪ್ಯಾಕೇಜ್ ಗಳನ್ನು ಸಂಬಂಧಿಸಿದವರಿಗೆ ನೀಡದೆ ಇರುವ ಘಟನೆ ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಕರ್ತವ್ಯ ಲೋಪದ ಆರೋಪದಲ್ಲಿ ಅಂಚೆ ಕಚೇರಿ ಉದ್ಯೋಗಿಯನ್ನು ಅಮಾನತು ಮಾಡಲಾಗಿದೆ.
ಜಗನ್ನಾಥ್ ಪುಹನ್ ಅಮಾನತುಗೊಂಡ ಉದ್ಯೋಗಿ. ಈತ ಭದ್ರಾಕ್ ನ ಒಡಂಗಾ ಶಾಖೆಯ ಅಂಚೆ ಕಚೇರಿಯಲ್ಲಿ, ಸಹಾಯಕ ಶಾಖೆಯ ಪೋಸ್ಟ್ ಮ್ಯಾನ್(ಎಬಿಪಿಎಂ) ಆಗಿ ಕೆಲಸ ಮಾಡುತ್ತಿದ್ದನು. ಈತ ತನ್ನ ನಿರ್ಲಕ್ಷ್ಯದಿಂದ ಕಚೇರಿಗೆ ಸುಮಾರು 2008 ರಿಂದ 2017 ರವರೆಗಿನ ಬಂದಂತಹ ಪತ್ರಗಳನ್ನು ಕೊಡದೆ ತನ್ನ ಬಳಿಯೇ ಉಳಿಸಿಕೊಂಡಿದ್ದಾನೆ.
ಕಚೇರಿಗೆ ಬಂದಿದ್ದ ಪತ್ರಗಳಲ್ಲಿ ಸರ್ಕಾರದ ಅಧಿಕೃತ ಪ್ರಕಟಣೆಗಳು, ಪರೀಕ್ಷಾ ಪ್ರವೇಶ ಪತ್ರಗಳು, ಕೆಲಸದ ನೇಮಕ ಪತ್ರ ಹಾಗೂ ಬಹುಮುಖ್ಯವಾದ ಮಾಹಿತಿಯ ಪತ್ರಗಳು ಸೇರಿದೆ. ಸುಮಾರು 1,500 ಪತ್ರ ಹಾಗೂ ವಸ್ತುಗಳು ಬಂದಿದೆ. ಈತನ ಕರ್ತವ್ಯ ಲೋಪದಿಂದ ಈ ಭಾಗದ ನೂರಾರು ಜನರು ಮುಖ್ಯವಾದ ಮಾಹಿತಿಗಳನ್ನು ತಿಳಿದುಕೊಳ್ಳಲಾಗದೆ ಸಮಸ್ಯೆ ಎದುರಿಸಿದ್ದಾರೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಅಂಚೆ ಕಚೇರಿಯ ಆವರಣದಲ್ಲಿ ಮಕ್ಕಳ ಆಟವಾಡುತ್ತಿದ್ದಾಗ ಅವರಿಗೆ ಚೀಲದಲ್ಲಿ ತುಂಬಿದ್ದ ಪತ್ರಗಳು ದೊರೆತಿದೆ. ಬಳಿಕ ಆ ಚೀಲದಿಂದ ಹೊರ ಬಂದಿದ್ದ ಕೆಲವು ಪತ್ರಗಳನ್ನು ಗಮನಿಸಿದ್ದಾರೆ. ಅವುಗಳಲ್ಲಿ ಎಟಿಎಂ ಕಾರ್ಡ್ ಗಳು, ಬ್ಯಾಂಕ್ ಪಾಸ್ ಬುಕ್ ಮತ್ತು ಪ್ಯಾನ್ ಕಾರ್ಡ್ ಗಳು ಕಂಡಿದೆ. ಇವುಗಳನ್ನು ಅವರು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದು, ಬಳಿಕ ಆತನ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ ಎಂದು ಓಡಾಂಗ ಪಂಚಾಯಿತಿಯ ಅಧ್ಯಕ್ಷ ಕಿಶೋರ್ ಪಡಿಯಾರಿ ಎಂಬವರು ಮಾಹಿತಿ ನೀಡಿದ್ದಾರೆ.
ಅಂದಹಾಗೇ ಜಗನ್ನಾಥ್ ಅಂಚೆ ಇಲಾಖೆಯ ಪೂರ್ಣಾವಧಿ ಸಮಯದ ನೌಕರನಲ್ಲ ಎಂದು ತಿಳಿದು ಬಂದಿದ್ದು, ಗುತ್ತಿಗೆ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಆದರೆ ಈತನ ನಿರ್ಲಕ್ಷ್ಯದಿಂದ ಸರಿಯಾದ ವೇಳೆಗೆ ಪತ್ರಗಳನ್ನು ಕೊಡದೆ ಕರ್ತವ್ಯ ಲೋಪ ಮಾಡಿದ್ದಾನೆ. ಮೊದಲು ಪುಹಾನ್ ಗ್ರಾಮೀಣ್ ಡಾಕ್ ಸೇವಕ್ ನೌಕರನಾಗಿ ಜಗನ್ನಾಥ್ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಳಿಕ ಈತನನ್ನು ಹೆಚ್ಚುವರಿ ಇಲಾಖೆಯ ಉದ್ಯೋಗಿಯಾಗಿ ವರ್ಗೀಕರಿಸಲಾಗಿ ಜುಲೈನಲ್ಲಿ ಎಬಿಪಿಎಮ್ ಎಂದು ಗೊತ್ತುಪಡಿಸಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಒಡಿಶಾ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಸಂತೋಷ್ ಕುಮಾರ್ ಕಮಿಲ್ಲಾ, ಕರ್ತವ್ಯ ಲೋಪದ ಆರೋಪದ ಮೇಲೆ ಜಗನ್ನಾಥ್ ನನ್ನು ಅಮಾನತು ಮಾಡಲಾಗಿದೆ. 10 ವರ್ಷಗಳಿಂದ ತನ್ನ ಕರ್ತವ್ಯವನ್ನು ಏಕೆ ನಿರ್ಲಕ್ಷಿಸಿದ್ದಾನೆ ಎಂಬುದರ ಕುರಿತು ಮಾಹಿತಿ ಪಡೆಯಲಾವುದು ಎಂದು ತಿಳಿಸಿದ್ದಾರೆ.
ಜಗನ್ನಾಥ್ ಕಾರ್ಯನಿರ್ವಹಿಸುವ ಪ್ರದೇಶದಲ್ಲಿ ಸಾರ್ವಜನಿಕರು ಯಾವುದೇ ದೂರು ನೀಡಿಲ್ಲ. ಆದ್ದರಿಂದ ಈ ಮಾಹಿತಿ ಲಭಿಸಿಲ್ಲ. ಪ್ರತಿ ಅಂಚೆ ಕಚೇರಿಗೂ ಇಲಾಖೆಯ ಉನ್ನತ ಅಧಿಕಾರಿಗಳು ಪ್ರತಿವರ್ಷ ಒಮ್ಮೆಯಾದರೂ ಶಾಖಾ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಆದರೆ ಈ ಕಾರ್ಯವೂ ನಡೆದಿಲ್ಲ. ಆದ್ದರಿಂದ ಈತ ಕರ್ತವ್ಯ ನಿರ್ವಹಿಸದೆ ಕರ್ತವ್ಯ ಲೋಪವೆಸಗಿದ್ದಾನೆ ಎಂದು ಅಂಚೆ ಉದ್ಯೋಗಿಯೊಬ್ಬರು ಹೇಳಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಜಗನ್ನಾಥ್ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ತಪಿಸ್ಥನಿಗೆ ಶಿಕ್ಷೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv