ಭುವನೇಶ್ವರ್: ಮೊದಲ ಆದಿವಾಸಿ ಜನಾಂಗದ ರಾಣಿ ಎಂಬ ಹೆಗ್ಗಳಿಕೆಗೆ ಓಡಿಶಾದ ಪಲ್ಲವಿ ದುರುವಾ ಪಾತ್ರರಾಗಿದ್ದಾರೆ.
ನಗರದ ಉತ್ಕಳ್ ಮಂಡಪ್ ದಲ್ಲಿ ಭಾನುವಾರ ನಡೆದ ಆದಿವಾಸಿ ರಾಣಿ ಕಳಿಂಗಾ ಸ್ಪರ್ಧೆಯಲ್ಲಿ ಆದಿವಾಸಿ ರಾಣಿ ಕಿರೀಟವನ್ನು ಧರಿಸಿದರು. ಓಡಿಶಾದ ಕೊರಪುಟ್ ಜಿಲ್ಲೆಯವರಾದ ಪಲ್ಲವಿ ದುರುವಾ ಆದಿವಾಸಿ ರಾಣಿ ಹೆಗ್ಗಳಿಕೆಗೆ ಪಾತ್ರವಾದರೆ ದ್ವಿತಿಯ ಸ್ಥಾನವನ್ನು ತಿತ್ಲಘರ್ ದ ಪಂಚಮಿ ಮಝಿ ಹಾಗೂ ತೃತೀಯ ಸ್ಥಾನವನ್ನು ರಶ್ಮಿರೇಖಾ ಹನ್ಸ್‍ದಾ ಪಡೆದು ಸಂಭ್ರಮಿಸಿದರು.
ಈ ಸಮಾರಂಭದಲ್ಲಿ ಮಾತನಾಡಿದ ವಿಜೇತೆ ಪಲ್ಲವಿ, ಹಲವಾರು ಆದಿವಾಸಿ ಸಮುದಾಯದ ಹೆಣ್ಣು ಮಕ್ಕಳು ಹೊರಗಡೆ ಸುತ್ತಾಡುವಂತಿಲ್ಲ, ವಿದ್ಯಾಭ್ಯಾಸವನ್ನೂ ಕೂಡ ಮಾಡುತ್ತಿಲ್ಲ. ಈಗ ನಾನು ಈ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಅವರೆಲ್ಲರಿಗೂ ಮಾದರಿಯಾಗಿದ್ದೇನೆ. ಇದರಿಂದಲಾದರೂ ಆದಿವಾಸಿ ಸಮುದಾಯದ ಹೆಣ್ಣುಮಕ್ಕಳು ಮೂಢನಂಬಿಕೆಗಳನ್ನು ಬಿಟ್ಟು ಜಗತ್ತನ್ನು ಎದುರಿಸುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಬುಡಕಟ್ಟು ಉಡುಪು, ಛಾಯಾಗ್ರಹಣ, ಉತ್ತಮ ಚರ್ಮ, ಉತ್ತಮ ಪ್ರಸ್ತುತಿ, ಉತ್ತಮ ವ್ಯಕ್ತಿತ್ವ, ಮತ್ತು ಪ್ರತಿಭೆ ಸೇರಿದಂತೆ ಹಲವು ವಿಭಾಗಗಳಲ್ಲಿ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು. ಆದಿವಾಸಿ ಸಮುದಾಯ ಕುರಿತ ಕಿರುಚಿತ್ರ ನಿರ್ಮಾಣವಾಗುತ್ತಿದ್ದು ಮುಂಬೈ ಮೂಲದ ನಿರ್ಮಾಪಕರು ಇದನ್ನು ಹೊರತರುತ್ತಿದ್ದಾರೆ.
ಈ ಸ್ಪರ್ಧೆಯಲ್ಲಿ ರಾಜ್ಯ ಹಾಗು ರಾಷ್ಟ್ರ ಮಟ್ಟದ ಪ್ರಸಿದ್ದ ವ್ಯಕ್ತಿಗಳು ನಿರ್ಣಾಯಕರಾಗಿ ಆಗಮಿಸಿದ್ದರು. ಅಲ್ಲದೇ ಪದ್ಮಶ್ರೀ ಪ್ರಸಸ್ತಿ ಪುರಸ್ಕೃತ ಹಾಗೂ ಕಾರ್ಯಕ್ರಮದ ರಾಯಭಾರಿಗಳೂ ಆದ ತುಳಸಿ ಮುಂಡಾ ಇದರ ನಾಯಕತ್ವವನ್ನು ವಹಿಸಿದ್ದರಿದ್ದರು.
ಓಡಿಶಾ ಸರ್ಕಾರದ ಎಸ್‍ಸಿ, ಎಸ್‍ಟಿ ಇಲಾಖೆಯ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ದೇಶದ ವಿವಿಧ ಭಾಗಗಳ ಆದಿವಾಸಿ ಸ್ಫರ್ಧಾಳುಗಳು ತಮ್ಮ ಸಮುದಾಯವನ್ನು ಪ್ರತಿನಿಧಿಸಿದ್ದರು. ಅಲ್ಲದೇ 20 ಕ್ಕೂ ಹೆಚ್ಚು ಸ್ಪರ್ಧಾಳುಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಬುಡಕಟ್ಟು ಹಲೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಸ್ಫರ್ಧಾಳುಗಳು ತಮ್ಮ ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟು ಹೆಜ್ಜೆಹಾಕಿದರು.
ಈ ಕುರಿತಂತೆ ಮಾತನಾಡಿದ ಈ ಲಾರ್ಯಕ್ರಮದ ಮುಖ್ಯಸ್ಥ ಚಿದಾತ್ಮಿಕ ಕಟುವಾ ಇಂದು ನಾವು ರಾಷ್ಟ್ರಮಟ್ಟದಲ್ಲಿ ಆದಿವಾಸಿ ಸಮುದಾಯದ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಇತಿಹಾಸವನ್ನು ಸೃಸ್ಟಿಸಿದ್ದೇವೆ. ರಾಣಿ ಎಂಬ ಪದವು ಅದು ಕೇವಲ ಸೌಂದರ್ಯಕ್ಕೆ ಸೀಮಿತವಾಗಿಲ್ಲ. ಆದಿವಾಸಿ ರಾಣಿ ಎಂದಾಗ ನಾವು ಅವರನ್ನು ಅವರ ನೃತ್ಯ ಹಾಗೂ ಕಲೆಯ ಮೂಲಕ ಗುರುತಿಸಬೇಕಾಗುತ್ತದೆ. ಈ ಮೂಲಕ ನಾವಿಂದು ಆದಿವಾಸಿ ಸಮುದಾಯಗಳಿಗೆ ಅವುಗಳದೇ ಆದ ಛಾಪನ್ನು ಮೂಡಿಸಿದ್ದೇವೆ ಎಂದರು.