ಭುವನೇಶ್ವರ್: ಏ. 14ರವರೆಗೆ ಹೇರಲಾಗಿದ್ದ ಲಾಕ್‍ಡೌನ್ ಆದೇಶವನ್ನು ಒಡಿಶಾ ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, ಏ. 30ರವರೆಗೂ ರಾಜ್ಯದಲ್ಲಿ ಲಾಕ್‍ಡೌನ್ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಮೂಲಕ ದೇಶದಲ್ಲಿ ಲಾಕ್‍ಡೌನ್ ವಿಸ್ತರಿಸಿದ ಮೊದಲ ರಾಜ್ಯವಾಗಿದೆ.
ಈ ಸಂಬಂಧ ಸ್ಪಷ್ಟನೆ ನೀಡಿರುವ ಸಿಎಂ ನವೀನ್ ಪಟ್ನಾಯಕ್, ಜನರ ಜೀವ ನಮ್ಮಗೆ ಮುಖ್ಯ ಈ ನಿಟ್ಟಿನಲ್ಲಿ ಲಾಕ್‍ಡೌನ್ ವಿಸ್ತರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದಲ್ಲದೇ ಏ. 30ರವರೆಗೂ ಯಾವುದೇ ವಿಮಾನ ಮತ್ತು ರೈಲು ಸಂಚಾರ ಆರಂಭಿಸದಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ದೇಶದಲ್ಲೂ ಎರಡು ವಾರ ಲಾಕ್‍ಡೌನ್ ವಿಸ್ತರಿಸುವಂತೆ ಕೇಳಿಕೊಂಡಿದ್ದಾರೆ.
#COVID19: Odisha extends lockdown till April 30th, the first state to do so pic.twitter.com/8t3FgFlOft
— ANI (@ANI) April 9, 2020
ದೇಶದಲ್ಲಿ ಲಾಕ್‍ಡೌನ್ ವಿಸ್ತರಿಸುವ ಹಲವು ಬೇಡಿಕೆಗಳು ಕೇಳಿ ಬಂದಿದೆ. ಈ ಪೈಕಿ 8ಕ್ಕೂ ಅಧಿಕ ರಾಜ್ಯಗಳು ಮನವಿ ಮಾಡಿದೆ. ಒಂದು ಹಂತ ಮುಂದೆ ಹೋಗಿರುವ ಒಡಿಶಾ ಸರ್ಕಾರ ರಾಜ್ಯದಲ್ಲಿ ಏ. 30ರವೆಗೆ ಲಾಕ್‍ಡೌನ್ ವಿಸ್ತರಿಸಿದೆ.
ಒಡಿಶಾದಲ್ಲಿ ಮಾ. 15ರಂದು ಮೊದಲ ಕೊರೊನಾ ಕೇಸ್ ಪತ್ತೆಯಾಗಿತ್ತು. ಈವರೆಗೂ ಒಡಿಶಾದಲ್ಲಿ 42 ಮಂದಿಗೆ ಸೋಂಕು ತಗುಲಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ರಾಜಧಾನಿ ಭುವನೇಶ್ವರ್ ನಲ್ಲೇ 18 ಪ್ರಕರಣಗಳು ಹೌಸಿಂಗ್ ಕಾಂಪ್ಲೆಕ್ಸ್ ಒಂದರಲ್ಲೇ ಪತ್ತೆಯಾಗಿದ್ದವು. ಇದಾದ ಬಳಿಕ ಸುಮಾರು ಒಂದೂವರೆ ಕಿ.ಮೀ ದಿಗ್ಭಂಧನ ವಿಧಿಸಲಾಗಿತ್ತು. ಒರ್ವ ವ್ಯಕ್ತಿ ಸಾವನ್ನಪ್ಪಿದ ಬಳಿಕ ರಾಜಧಾನಿಯ ಕೆಲ ಪ್ರದೇಶಗಳಿಗೆ ದಿಗ್ಭಂಧನ ವಿಸ್ತರಿಸಲಾಗಿತ್ತು. ಈಗ ಇಡೀ ರಾಜ್ಯದಲ್ಲಿ ಲಾಕ್‍ಡೌನ್ ಆದೇಶವನ್ನು ವಿಸ್ತರಿಸಲಾಗಿದೆ.