ಚೆನ್ನೈ: ತಮಿಳುನಾಡಿನ ರಾಜಕೀಯ ಬಿಕಟ್ಟು ಒಂದು ರೀತಿಯಲ್ಲಿ ರೋಚಕ ಘಟ್ಟ ತಲುಪಿದೆ. ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಹಾಗೂ ಹೊಸ ಸರ್ಕಾರ ರಚನೆಗೆ ಅವಕಾಶ ಕೇಳ್ತಿರೋ ಶಶಿಕಲಾ ನಟರಾಜನ್ ಗುರುವಾರದಂದು ಚೆನ್ನೈನಲ್ಲಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರನ್ನ ಭೇಟಿಯಾಗಿದ್ರು. ಇಬ್ಬರ ಭೇಟಿ ಬಳಿಕ ತಮಿಳುನಾಡಿನ ಪರಿಸ್ಥಿತಿಯ ಬಗ್ಗೆ ಕೇಂದ್ರಕ್ಕೆ ರಾಜ್ಯಪಾಲರು ವರದಿ ರವಾನಿಸಿದ್ದಾರೆ.
ಜೊತೆಗೆ ಸಾಂವಿಧಾನಿಕ ಹಾಗೂ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ್ದಾರೆ. ಶಶಿಕಲಾ ವಿರುದ್ಧ ಅಕ್ರಮ ಆಸ್ತಿ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ರೆ ಮತ್ತಷ್ಟು ಬಿಕ್ಕಟ್ಟು ಉಂಟಾಗಬಹುದು ಅಂತ ತಜ್ಞರು ಹೇಳಿದ್ದಾರೆ. ಹೀಗಾಗಿ ತಕ್ಷಣ ಸರ್ಕಾರ ರಚನೆಗೆ ಅವಕಾಶ ನೀಡದೇ ಕಾದು ನೋಡುವ ತಂತ್ರಕ್ಕೆ ಮೊರೆಹೋಗೋ ಸಾಧ್ಯತೆಯಿದೆ. ತೀರ್ಪು ಶಶಿಕಲಾ ವಿರುದ್ಧ ಬಂದ್ರೆ ಕೇಂದ್ರ ಸರ್ಕಾರನೂ ಪನ್ನೀರ್ ಸೆಲ್ವಂ ಪರ ನಿಲ್ಲುತ್ತೆ ಅಂತ ಮೂಲಗಳು ತಿಳಿಸಿವೆ.
Advertisement
ಗುರುವಾರದಂದು ರಾಜ್ಯಪಾಲರನ್ನು ಭೇಟಿಯಾಗಿದ್ದ ಸೆಲ್ವಂ, ರಾಜೀನಾಮೆ ಹಿಂಪಡೀತಿನಿ. ಬಹುಮತ ಸಾಬೀತಿಗೆ ಅವಕಾಶ ಕೊಡಿ ಅಂತ ಕೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ, ಧರ್ಮ ಗೆಲ್ಲುತ್ತೆ ಅಂತ ಮಾಧ್ಯಮಗಳ ಮುಂದೆನೂ ಹೇಳಿದ್ದಾರೆ. ಇನ್ನು ಶಶಿಕಲಾ ತನಗೆ 130 ಶಾಸಕರ ಬೆಂಬಲ ಇದೆ ಅಂತ ಸಹಿ ಇರೋ ಪತ್ರವನ್ನ ರಾಜ್ಯಪಾಲರಿಗೆ ನೀಡಿದ್ದಾರೆ. ಈ ಮಧ್ಯೆ, ಶಶಿಕಲಾ ಪರ ರೆಸಾರ್ಟ್ ಸೇರಿರೋ ಶಾಸಕರಲ್ಲಿ ಸುಮಾರು 30ರಷ್ಟು ಮಂದಿ ಸೆಲ್ವಂ ಪರವಾಗಿದ್ದಾರೆ ಅಂತ ತಿಳಿದುಬಂದಿದೆ.