ಶಶಿಕಲಾ ರೆಸಾರ್ಟ್ ಬಿಟ್ಟರೂ ಶಾಸಕರ ಠಿಕಾಣಿ- ಅಧಿಕಾರಿಗಳಿಂದ ರೆಸಾರ್ಟ್‍ನ ವಿದ್ಯುತ್ ಸಂಪರ್ಕ ಕಟ್

Public TV
2 Min Read
sasikala

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನಲ್ಲಿ ಮಂಗಳವಾರ ತೀರ್ಪು ಪ್ರಕಟ ಆಗಲು ಸಮಯ ನಿಗದಿಯಾಗುತ್ತಿದ್ದ ಹಾಗೆ ಸೋಮವಾರವೇ ಶಾಸಕರ ಜೊತೆ ರೆಸಾರ್ಟ್ ಸೇರಿದ್ದ ಚಿನ್ನಮ್ಮ ತಡರಾತ್ರಿ ಪೋಯಸ್ ಗಾರ್ಡನ್ ಮನೆಗೆ ಬಂದಿದ್ದಾರೆ. ನಿನ್ನೆ ತಡರಾತ್ರಿ ಪೋಯಸ್ ಗಾರ್ಡನ್ ಮನೆಗೆ ತೆರಳುವುದಕ್ಕೆ ಮುಂಚೆ ಸ್ಥಳೀಯ ಮಾಧ್ಯಮವೊಂದರ ಜೊತೆ ಮಾತನಾಡಿರುವ ಶಶಿಕಲಾ, ಒಂದು ರೀತಿಯ ವಿದಾಯ ಭಾಷಣ ಮಾಡಿದ್ದಾರೆ.

ನನಗೆ ಬೆಂಬಲ ಸೂಚಿಸಿದ ಎಲ್ಲಾ ಶಾಸಕರುಗಳಿಗೂ ಧನ್ಯವಾದ. ಎಐಡಿಎಂಕೆ ಪಕ್ಷ ಮಾತ್ರ ನನಗೆ ಮುಖ್ಯವಾಗಿದ್ದು, ನನ್ನನ್ನು ಪಕ್ಷದಿಂದ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಈ ವಿಚಾರವನ್ನು ಅಲ್ಲಿನ ಜಯಾ ಟಿವಿ ಪ್ರಸಾರ ಮಾಡಿದೆ. ಇದಾದ ಬಳಿಕ ಪೋಯಸ್ ಗಾರ್ಡನ್ ಮನೆ ಮುಂದೆ ಜಮಾಯಿಸಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಚಿನ್ನಮ್ಮ, ನಾನು ಜೈಲಿಗೆ ಹೋಗುತ್ತಿದ್ದೇನೆ ಅಂತಾ ನೀವು ಅಳಬೇಡಿ ಅಂತಾ ಹೇಳಿದ್ದಾರೆ.

ಬಳಿಕ ಜಯಲಲಿತಾ ಹಾಗೂ ನನ್ನ ಮೇಲೆ ಉದ್ದೇಶಪೂರ್ವಕವಾಗಿ ಕೇಸ್ ಹಾಕಿದ್ದು ಡಿಎಂಕೆ ಅಂತಾ ದೂರಿದ್ದಾರೆ. ಇದರ ಮಧ್ಯೆ ಕೊವತ್ತೂರು ರೆಸಾರ್ಟ್ ಖಾಲಿ ಮಾಡುವಂತೆ ಎಐಡಿಎಂಕೆ ಪಕ್ಷದ ಶಶಿಕಲಾ ಗುಂಪಿನ ಶಾಸಕರಿಗೆ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ರು. ಆದ್ರೆ ಶಾಸಕರು ಗೋಲ್ಡನ್ ಬೇ ರೆಸಾರ್ಟ್ ಖಾಲಿ ಮಾಡಲು ನಿರಾಕರಿಸಿದ್ರು, ಏನಾದ್ರು ಒತ್ತಾಯ ಮಾಡಿ ದಬ್ಬಾಳಿಕೆ ಮಾಡಿದ್ರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ರು. ಆ ಬಳಿಕ ರೆಸಾರ್ಟ್‍ಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತ ಮಾಡಲಾಗಿದೆ. ಆದ್ರೂ ಕೂಡ ಶಾಸಕರು ಅಲ್ಲೇ ಬೀಡುಬಿಟ್ಟಿದ್ದಾರೆ.

ಜಯಾ ಸಮಾಧಿಗೆ ಪನ್ನೀರ್, ದೀಪಾ ಭೇಟಿ: ಮಂಗಳವಾರ ಬೆಳಗ್ಗೆ ಸುಪ್ರೀಂಕೋರ್ಟ್‍ನಲ್ಲಿ ತೀರ್ಪು ಪ್ರಕಟ ಆಗ್ತಿದ್ದ ಹಾಗೆ ಜಯಲಲಿತಾ ಸೋದರ ಸಂಬಂಧಿಗಳಾದ ದೀಪಾ ಹಾಗೂ ದೀಪಕ್‍ರನ್ನು ಕರೆದು ಚಿನ್ನಮ್ಮ ಶಶಿಕಲಾ ಮಾತನಾಡಿದ್ರು. ಇದಾದ ಬಳಿಕ ಸಂಜೆ ದೀಪಾ, ಪನ್ನೀರ್ ಸೆಲ್ವಂ ಬಳಗ ಸೇರಿದ್ದು, ರಾತ್ರಿ ಜಯಾ ಸಮಾಧಿಗೆ ಪನ್ನೀರ್ ಸೆಲ್ವಂ ಹಾಗೂ ಈಗಾಗಲೇ ಪಕ್ಷದಿಂದ ವಜಾಗೊಂಡಿರುವ ಶಾಸಕರು ಹಾಗೂ ಸಂಸದರ ಜೊತೆ ಭೇಟಿ ನೀಡಿದ್ರು. ಇಂದಿನಿಂದ ನಾನು ಸಕ್ರಿಯ ರಾಜಕಾರಣಕ್ಕೆ ಬರುತ್ತೇನೆ ಅಂತಾ ದೀಪಾ ಸಮಾಧಿ ಬಳಿಯೇ ಘೋಷಣೆ ಮಾಡಿದ್ರು. ಈ ಮೂಲಕ ಪನ್ನೀರ್ ಸೆಲ್ವಂ ಬಣದ ಬಲ ನಿಧಾನವಾಗಿ ಹೆಚ್ಚಾಗುತ್ತಿದೆ. ಇದಕ್ಕೂ ಮೊದಲು ಎಐಎಡಿಎಂ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಎಡಪ್ಪಾಡಿ ಕೆ ಪಳನಿಸ್ವಾಮಿ ರಾಜ್ಯಪಾಲ ಸಿ ವಿದ್ಯಾಸಾಗರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಮನವಿ ಮಾಡಿದ್ರು. ಈ ವೇಳೆ ಹಲವು ಸಚಿವರು ಪಳನಿಸ್ವಾಮಿಗೆ ಸಾಥ್ ನೀಡಿದ್ರು.

Share This Article
1 Comment

Leave a Reply

Your email address will not be published. Required fields are marked *