Connect with us

Cricket

ಬೌಲರ್‍ ಗೆ ಹೆಲ್ಮೆಟ್ – ನ್ಯೂಜಿಲೆಂಡ್ ದೇಶಿ ಕ್ರಿಕೆಟ್ ನಲ್ಲಿ ವಿನೂತನ ಪ್ರಯೋಗ

Published

on

ಹ್ಯಾಮಿಲ್ಟನ್: ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ಸ್ ಮನ್ ಗಳು ಹಾಗೂ ವಿಕೆಟ್ ಕೀಪರ್ ಗಳು ಹೆಲ್ಮೆಟ್ ಧರಿಸಿ ಆಟವಾಡುವುದು ಸಾಮಾನ್ಯ. ಆದರೆ ನ್ಯೂಜಿಲೆಂಡ್ ನಲ್ಲಿ ಬೌಲರ್ ಒಬ್ಬರು ಹೆಲ್ಮೆಟ್ ಧರಿಸಿ ಬೌಲ್ ಮಾಡಿ ಸುದ್ದಿಯಾಗಿದ್ದಾರೆ.

ಹೌದು, ನ್ಯೂಜಿಲೆಂಡ್ ನ ದೇಶಿಯ ಸೂಪರ್ ಸ್ಮಾಶ್ ಟಿ20 ಟೂರ್ನಿಯ ನಾರ್ಥನ್ ಡಿಸ್ಟ್ರಿಕ್ಟ್ಸ್ ಹಾಗೂ ಒಟಾಗೊ ತಂಡದ ನಡುವಿನ ಪಂದ್ಯದಲ್ಲಿ ವೇಗದ ಬೌಲರ್ ವಾರೆನ್ ಬಾರ್ನೆಸ್ ಹೆಲ್ಮೆಟ್ ಧರಿಸಿ ಬೌಲ್ ಮಾಡಿದರು. ಈ ಮೂಲಕ ದೇಶಿಯ ಟಿ20 ಮಾದರಿಯಲ್ಲಿ ಹೆಲ್ಮೆಟ್ ಧರಿಸಿ ಬೌಲ್ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹೆಲ್ಮೆಟ್ ಧರಿಸಲು ಕಾರಣವೇನು?
ಶನಿವಾರ ನಡೆದ ದೇಶಿಯ ಟೂರ್ನಿಯ ಪಂದ್ಯದಲ್ಲಿ ಆಡಿದ ಉದಯೋನ್ಮುಖ ಆಟಗಾರರಾದ ವಾರೆನ್ ಅವರು ವಿಶಿಷ್ಟ ಬೌಲಿಂಗ್ ಶೈಲಿಯನ್ನು ಹೊಂದಿದ್ದಾರೆ. ಬೌಲ್ ಮಾಡುವ ವೇಳೆ ಅವರ ತಲೆ ನೆಲದತ್ತ ಬಾಗಿರುತ್ತದೆ. ಈ ಸಂದರ್ಭದಲ್ಲಿ ಬ್ಯಾಟ್ಸ್ ಮನ್ ನೇರವಾಗಿ ಹೊಡೆದರೆ ಬಾಲ್ ವಾರೆನ್ ಅವರ ತಲೆಗೆ ಬಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣಕ್ಕೆ ಯಾವುದೇ ರೀತಿಯ ಅಪಾಯ ಆಗದೇ ಇರಲು ವಾರೆನ್ ಹೆಲ್ಮೆಟ್ ಧರಿಸಿ ಬೌಲ್ ಮಾಡುತ್ತಿದ್ದಾರೆ.

ಹೆಲ್ಮೆಟ್ ವಿನ್ಯಾಸ ಹೇಗಿದೆ?
ಬಾಕ್ಸಿಂಗ್ ವೇಳೆ ಆಟಗಾರರು ಧರಿಸುವ ಹೆಲ್ಮೆಟ್ ವಿನ್ಯಾಸದಿಂದ ಪ್ರೇರಿತವಾಗಿ ತಲೆಯನ್ನು ಸಂಪೂರ್ಣವಾಗಿ ರಕ್ಷಣೆ ಮಾಡುವಂತಹ ವಿನ್ಯಾಸವನ್ನು ರೂಪಿಸಲಾಗಿದೆ. ಅಷ್ಟೇ ಅಲ್ಲದೇ ಮುಖದ ಭಾಗಕ್ಕೂ ರಕ್ಷಣೆ ನೀಡುವ ಪಾರದರ್ಶಕ ಪಟ್ಟಿಯನ್ನು ಅಳವಡಿಸಲಾಗಿದೆ.

ಕ್ರಿಕೆಟ್ ಇತಿಹಾಸದಲ್ಲಿ ಇಂತಹ ವಿಶೇಷ ಪ್ರಯೋಗ ಇದೇ ಮೊದಲ ಬಾರಿ ನಡೆದಿದ್ದು, ಈ ಪ್ರಯೋಗ ವಿಶ್ವ ಕ್ರಿಕೆಟ್‍ನ ಹಲವು ಆಟಗಾರರು ಹಾಗೂ ಅಭಿಮಾನಿಗಳ ಗಮನ ಸೆಳೆದಿದೆ. ಅಲ್ಲದೇ ಭಾರಿ ಚರ್ಚೆಗೂ ಕಾರಣವಾಗಿದ್ದು, ಕ್ರಿಕೆಟ್ ವಲಯದಿಂದ ವಿಭಿನ್ನ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಹೆಲ್ಮೆಟ್ ಧರಿಸಲು ಪ್ರೇರಣೆ ಏನು?
ಇಂಗ್ಲೇಡ್ ದೇಶಿಯ ಪಂದ್ಯದ ವೇಳೆ ಯುವ ಬೌಲರ್ ಲ್ಯುಕ್ ಫ್ಲೆಚರ್ ಗೆ ಚೆಂಡು ಬಡಿದು ಗಂಭೀರವಾದ ಗಾಯವಾಗಿತ್ತು. ತಲೆಗೆ ಬಡಿದ ಕಾರಣ ಫ್ಲೆಚರ್ ಅಲ್ಲೇ ಕುಸಿದು ಬಿದ್ದಿದ್ದರು. ಈ ಘಟನೆಯನ್ನು ನೋಡಿ ವಾರೆನ್ ಬಾರ್ನೆಸ್ ಕೋಚ್ ಜೊತೆ ಸೇರಿ ಈ ಹೆಲ್ಮೆಟ್ ವಿನ್ಯಾಸಗೊಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಆನ್ ಫೀಲ್ಡ್ ನಲ್ಲಿರುವ ಅಂಪೈರ್ ಗಳು ಸಹ ಹೆಲ್ಮೆಟ್ ಧರಿಸಿ ಕಾರ್ಯನಿರ್ವಹಿಸುವ ಹಲವು ಘಟನೆಗಳು ನಡೆದಿದ್ದು, ಎಲ್ಲವೂ ಆಟಗಾರರ ಜೀವದ ರಕ್ಷಣೆ ಮಾಡುವ ಉದ್ದೇಶವನ್ನು ಒಳಗೊಂಡಿದೆ.

Click to comment

Leave a Reply

Your email address will not be published. Required fields are marked *