ಲಾಕ್‍ಡೌನ್: ಹುಬ್ಬಳ್ಳಿ ಸಾರಿಗೆ ವಿಭಾಗಕ್ಕೆ 23 ಕೋಟಿ ರೂ. ಆದಾಯ ನಷ್ಟ!

Public TV
2 Min Read
HBL KSRTC BUS copy

ಹುಬ್ಬಳ್ಳಿ: ಲಾಕ್‍ಡೌನ್ ಪರಿಣಾಮವಾಗಿ ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿದ್ದರಿಂದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ  ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಸಾರಿಗೆ ವಿಭಾಗಕ್ಕೆ ಅಂದಾಜು ರೂ. 23 ಕೋಟಿ ರೂ. ಆದಾಯ ನಷ್ಟ ಉಂಟಾಗಿದೆ.

ಹುಬ್ಬಳ್ಳಿ ವಿಭಾಗದಲ್ಲಿ ನಾಲ್ಕು ಬಸ್ ಘಟಕಗಳಲ್ಲಿ ಒಟ್ಟು 462 ಬಸ್ಸುಗಳು ಹಾಗೂ 2,173 ಸಿಬ್ಬಂದಿಗಳಿದ್ದಾರೆ. ವಿಭಾಗದ ಬಸ್ಸುಗಳು ಪ್ರತಿದಿನ 1.90 ಲಕ್ಷ ಕಿ.ಮೀ ಗಳಷ್ಟು ಕ್ರಮಿಸಿ ವಿವಿಧ ರಿಯಾಯಿತಿ ಪಾಸು ಪ್ರಯಾಣಿಕರು ಸೇರಿದಂತೆ 1.45 ಲಕ್ಷ ಸಾರ್ವಜನಿಕ ಪ್ರಯಾಣಿಕರು ಹಾಗೂ 45 ಸಾವಿರ ವಿದ್ಯಾರ್ಥಿಗಳಿಗೆ ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಸಂಸ್ಥೆಗೆ 45 ರಿಂದ 50 ಲಕ್ಷ ರೂ. ಸಾರಿಗೆ ಆದಾಯ ಸಂಗ್ರಹಣೆ ಆಗುತ್ತಿತ್ತು.

HBL KSRTC BUS a copy

ಮಾರ್ಚ್ ತಿಂಗಳಲ್ಲಿ 9ರ ವರೆಗೂ ಬಸ್ಸುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿರಲಿಲ್ಲ. ಆದ್ದರಿಂದ ಆದಾಯ ಸಂಗ್ರಹಣೆ ನಿರೀಕ್ಷೆಯಿತ್ತು. ನಂತರದಲ್ಲಿ ಕೊರೊನಾ ಮತ್ತು ಹೋಳಿ ಕಾರಣ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಕುಸಿಯತೊಡಗಿತು. ಪರಿಣಾಮ ಮಾರ್ಚ್ 22ರ ವರೆಗೂ ಬಸ್ಸುಗಳ ಸಂಖ್ಯೆಯೂ ಸಹ ದಿನದಿಂದ ದಿನಕ್ಕೆ ಕ್ಷೀಣಿಸತೊಡಗಿ 23 ರಿಂದ ಶೂನ್ಯಕ್ಕಿಳಿಯಿತು.

ಮಾರ್ಚ್ ತಿಂಗಳಿನಲ್ಲಿ ಭಾಗಶಃ ಬಸ್ ಕಾರ್ಯಾಚರಣೆಯಾಗಿದ್ದರಿಂದ ನಿರೀಕ್ಷಿತ ಸಾರಿಗೆ ಆದಾಯದಲ್ಲಿ 5.50 ಕೋಟಿ ರೂ. ಗಳಷ್ಟು ಕೊರತೆಯಾಗಿತ್ತು. ಆದರೆ ಏಪ್ರಿಲ್ ತಿಂಗಳಲ್ಲಿ ಯಾವುದೇ ಬಸ್ಸು ರಸ್ತೆಗಿಳಿಯದಿರುವುದರಿಂದಾಗಿ 17.50 ರೂ. ಕೋಟಿ ಆದಾಯ ನಷ್ಟ ಉಂಟಾಗಿರುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ್ ತಿಳಿಸಿದ್ದಾರೆ.

HBL BUS STOP

ಲಾಕ್‍ಡೌನ್ ಅವಧಿಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದರೂ ಸಹ ಬಸ್ಸುಗಳ ತುರ್ತು ನಿರ್ವಹಣೆ ಮತ್ತು ಸಂಸ್ಥೆಯ ಆಸ್ತಿಗಳ ರಕ್ಷಣೆಯಂತಹ ಕಾರ್ಯಗಳನ್ನು ನಿರಂತರವಾಗಿ ನಿರ್ವಹಿಸಲೇಬೇಕಾಗಿತ್ತು. ವಿಭಾಗೀಯ ಕಚೇರಿ ಹಾಗೂ ಘಟಕ ಪೆಟ್ರೋಲಿಂಗ್ ತಂಡದ ಅಧಿಕಾರಿಗಳು ಪ್ರತಿದಿನ ಎಲ್ಲಾ ಘಟಕಗಳು ಮತ್ತು ಪ್ರಮುಖ ಬಸ್ ನಿಲ್ದಾಣಗಳ ಗಸ್ತು ತೆಗರದುಕೊಳ್ಳುತ್ತಿದ್ದಾರೆ. ಘಟಕದಲ್ಲೂ ತುರ್ತು ನಿರ್ವಹಣಾ ತಂಡದಲ್ಲಿ ಮೂರು ಪಾಳಿಯಲ್ಲಿ ಇಬ್ಬರು-ಮೂವರಂತೆ ಚಾಲಕರು, ತಾಂತ್ರಿಕ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ನಿರಂತರವಾಗಿ ಎಲ್ಲಾ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

hbl jagadish shettar 1

ಬಿಸಿಲಿನ ಅತಿಯಾದ ತಾಪಮಾನದಿಂದ ಆಕಸ್ಮಿಕ ಬೆಂಕಿ ಅನಾಹುತ, ಮತ್ತಿತರ ಅವಘಡಗಳಿಂದ ಬಸ್ಸುಗಳನ್ನು ಸಂರಕ್ಷಿಸಲು ನಿತ್ಯ ಜಲಾಭಿಷೇಕ ಮಾಡಲಾಗುತ್ತಿದೆ. ಅಲ್ಲಲ್ಲಿ ನೀರು ತುಂಬಿದ ಬ್ಯಾರಲ್ ಗಳು ಹಾಗೂ ಬಕೆಟ್‍ಗಳನ್ನಿಡಲಾಗಿದೆ. ಎಲ್ಲಾ ಘಟಕಗಳಲ್ಲಿ ಬೆಂಕಿ ನಂದಿಸುವ ಉಪಕರಣಗಳನ್ನು ಅಳವಡಿಸಿದ್ದಾರೆ. ಅಲ್ಲದೇ ಉಪಕರಣಗಳ ಸಮಯೋಚಿತ ಉಪಯೋಗದ ಬಗ್ಗೆ ಭದ್ರತಾ ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ತರಬೇತಿಯನ್ನು ಸಹ ನೀಡಲಾಗಿದೆ. ಎಲ್ಲಾ ಬಸ್ಸುಗಳ ಬ್ಯಾಟರಿ ಬಾಕ್ಸ್ ಗಳನ್ನು ಸ್ವಚ್ಚಗೊಳಿಸಲಾಗಿದೆ. ಬಹುದಿನಗಳಿಂದ ಬಸ್ಸುಗಳು ನಿಂತಲ್ಲೇ ನಿಂತಿರುವುದರಿಂದ, ಬ್ಯಾಟರಿ ಡೆಡ್ ಆಗುವುದನ್ನು ತಡೆಯುವುದಕ್ಕಾಗಿ ದಿನ ಬಿಟ್ಟು ದಿನ ಇಂಜಿನ್ ಚಾಲೂ ಮಾಡಿ ಕೆಲ ಅಡಿಗಳವರೆಗೆ ಚಾಲನೆ ಮಾಡಿ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಸಾರ್ವಜನಿಕ ಸಾರಿಗೆ ಪುನರಾರಂಭಿಸಲು ಸರ್ಕಾರದ ಆದೇಶ ಬಂದ ಕೂಡಲೆ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಎಲ್ಲಾ ಮುಂಜಾಗೃತಾ ಕ್ರಮಗಳೊಂದಿಗೆ ಬಸ್ಸುಗಳನ್ನು ರಸ್ತೆಗಿಳಿಸಲು ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *