Connect with us

Latest

3 ಈಡಿಯೆಟ್ಸ್ ಸ್ಟೈಲ್‍ನಲ್ಲಿ ಹೆರಿಗೆ ಮಾಡಲೆತ್ನಿಸಿದ ನರ್ಸ್‍ಗಳು- ನವಜಾತ ಶಿಶು ಸಾವು

Published

on

ಭುವನೇಶ್ವರ: ಬಾಲಿವುಡ್ ಚಿತ್ರ 3 ಈಡಿಯೆಟ್ಸ್ ಶೈಲಿಯಲ್ಲಿ ಮಹಿಳೆಯೊಬ್ಬರಿಗೆ ನರ್ಸ್‍ಗಳು ಹೆರಿಗೆ ಮಾಡಿಸಲು ಯತ್ನಿಸಿದ್ದು, ಮಗು ಸಾವನ್ನಪ್ಪಿದ ಘಟನೆ ಒಡಿಶಾದಲ್ಲಿ ನಡೆದಿದೆ.

ಒಡಿಶಾದ ಕೇಂದ್ರಪಾದ ಜಿಲ್ಲೆಯ ಸಾಯಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಗರ್ಭಿಣಿ ಆರತಿ ಸಮಲ್ ಅವರನ್ನ ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತಿ ಕಲ್ಪತರು ಸಮಲ್ ಕೂಡ ಆಸ್ಪತ್ರೆಯಲ್ಲಿದ್ದರು. ಆರತಿ ಅವರಿಗೆ ಹೆರಿಗೆ ಮಾಡಿಸಬೇಕಿದ್ದ ಡಾ. ರಶ್ಮೀಕಂತ್ ಪಾತ್ರ ಆಸ್ಪತ್ರೆಯಲ್ಲಿ ಇರಲಿಲ್ಲ.

2009ರ ಬ್ಲಾಕ್‍ಬಸ್ಟರ್ ಚಿತ್ರ 3 ಈಡಿಯೆಟ್ಸ್‍ನಲ್ಲಿ ನಾಯಕ ಆಮಿರ್ ಖಾನ್ ಫೋನ್‍ನಲ್ಲಿ ಮಾರ್ಗದರ್ಶನ ಪಡೆದು ಯುವತಿಗೆ ಹೆರಿಗೆ ಮಾಡಿಸುವ ದೃಶ್ಯವಿದೆ. ಅದರಂತೆ ನರ್ಸ್‍ಗಳು ವೈದ್ಯರೊಂದಿಗೆ ಫೋನ್‍ನಲ್ಲಿ ಚರ್ಚಿಸುತ್ತಾ ಮಹಿಳೆಗೆ ಹೆರಿಗೆ ಮಾಡಲೆತ್ನಿಸಿದ್ದರು. ವೈದ್ಯರೊಂದಿಗೆ ಮಾತನಾಡುತ್ತಾ ಸಿಜೇರಿಯನ್ ಮಾಡಲು ಮುಂದಾಗಿದ್ದರು. ಆದ್ರೆ ಅದು ವಿಫಲವಾಗಿದ್ದು, ಮಗು ಸಾವನ್ನಪ್ಪಿದೆ. ನರ್ಸ್‍ಗಳು ಹೆರಿಗೆ ಮಾಡಿಸಲು ಯತ್ನಿಸಿದ್ದರಿಂದ ಆರತಿ ಅವರು ಮಗುವನ್ನ ಕಳೆದುಕೊಂಡಿದ್ದಲ್ಲದೆ ಅವರ ಗರ್ಭಾಶಯಕ್ಕೂ ಹಾನಿಯಾಗಿದೆ.

ಆರತಿ ಅವರ ಗಂಡ ಕಲ್ಪತರು ಮಗುವಿನ ದೇಹವನ್ನ ಕೇಂದ್ರಪಾದ ಟೌನ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ವೈದ್ಯರ ವಿರುದ್ಧ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

ನಾವು ಡಾ. ರಾಶ್ಮಿಕಾಂತ್ ಪಾತ್ರ ಅವರನ್ನ ಸಂಪರ್ಕಿಸಿದಾಗ, ಅವರು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡುವಂತೆ ಹೇಳಿದ್ದರು. ಆಸ್ಪತ್ರೆಯಲ್ಲಿ ತಾನು ಇಲ್ಲ, ಆದ್ರೂ ಅಡ್ಮಿಟ್ ಆದ ಬಳಿಕ ನರ್ಸ್‍ಗಳೊಂದಿಗೆ ಮಾತನಾಡಿ ಸೂಕ್ತ ಆರೈಕೆ ಮಾಡುವಂತೆ ನೋಡಿಕೊಳ್ಳುತ್ತೇನೆ ಎಂದಿದ್ದರು. ಆದ್ರೆ ನನ್ನ ಹೆಂಡತಿಯ ಪರಿಸ್ಥಿತಿ ಚಿಂತಾಜನಕವಾದಾಗಲೂ ಅವರು ಆಸ್ಪತ್ರೆಗೆ ಬರಲಿಲ್ಲ. ಯಾರು ಮಾಡಿದ್ದು ಅಂತ ನನಗೆ ಗೊತ್ತಿಲ್ಲ. ಆದ್ರೆ ನನ್ನ ಹೆಂಡತಿಗೆ ಆಪರೇಷನ್ ಮಾಡಲಾಗಿದ್ದು, ಈಗ ನಮ್ಮ ಮೊದಲ ಮಗುವನ್ನ ಕಳೆದುಕೊಂಡಿದ್ದೇವೆ. ನನ್ನ ಹೆಂಡತಿಯ ಗರ್ಭಾಶಯಕ್ಕೂ ಹಾನಿಯಾಗಿದೆ. ನರ್ಸ್‍ಗಳು ವೈದ್ಯರೊಂದಿಗೆ ಫೋನ್‍ನಲ್ಲಿ ಮಾತನಾಡಿ, ಸಾಧ್ಯವಾದಷ್ಟು ಪ್ರಯತ್ನಿಸಿದೆವು ಅಂತ ಹೇಳಿದ್ರು. ಇದು ಕೇವಲ ಆಸ್ಪತ್ರೆ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಕಲ್ಪತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in